ಅಂತರರಾಷ್ಟ್ರೀಯಇತರೆ

ಕಾಶಿಯಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ಧಾರ್ಮಿಕ ಸಮಾವೇಶ

ವಾರಣಸಿ, ಮಾ, 26; ಭಗವತ್ಪಾದ ಶ್ರೀ ಶಂಕರಾಚಾರ್ಯರ ಉಪದೇಶಗಳನ್ನು ದೇಶಾದ್ಯಂತ ಜನ ಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ವೇದಾಂತ ಭಾರತಿಯ ಸಂರಕ್ಷಕರಾದ ಶ್ರೀ ಶಂಕರಭಾರತೀ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಉತ್ತರ ಪ್ರದೇಶದ ವಾರಣಸಿಯಲ್ಲಿ ರಾಷ್ಟ್ರಮಟ್ಟದ ಸಾಧು – ಸಂತರ ಎರಡು ದಿನಗಳ ಭವ್ಯ ಸಮಾವೇಶ ಇಂದಿನಿಂದ ಆರಂಭವಾಗಿದೆ. ಕಾಶಿಯ ಮಹಮೂರ್ ಗಂಜ್ ನಲ್ಲಿರುವ ಶ್ರೀ ಶೃಂಗೇರಿ ಮಠದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಸಂತರು, ಮಹಾಂತರು, ಮಹಾಪುರುಷರು, ಪೀಠಾಧೀಶರು, ಮಹಾಮಂಡಲೇಶ್ವರರು, ಆಚಾರ್ಯ ಮಹಾಮಂಡಲೇಶ್ವರರು, ಮುಂತಾದ ಆದಿ ಶಂಕರಾಚಾರ್ಯರ ಅದ್ವೈತ ಸಿದ್ಧಾಂತವನ್ನು ಅನುಸರಿಸುವ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಿದ್ದಾರೆ.

ಶ್ರೀ ಶಂಕರಾಚಾರ್ಯರ ಉಪದೇಶ, ಅವರ ಕೃತಿಗಳು ಮತ್ತು ಅವರು ಪ್ರತಿಪಾದಿಸಿದ ಏಕಾತ್ಮತತ್ವವನ್ನು ಮನೆ ಮನೆಗಳಿಗೆ ಹೇಗೆ ತಲುಪಿಸಬಹುದು ಎನ್ನುವ ಕುರಿತು ಮತ್ತು ಅಯೋಧ‍್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ಶಂಕರಾಚಾರ್ಯರ ಧ್ಯಾನ ಮಂದಿರ, ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಭಗವತ್ಪಾದರು ತತ್ವ ಚಿಂತನೆಗಳ ಮಂಥನ ನಡೆಯುತ್ತಿವೆ. ಈ ಸಮಾವೇಶದಲ್ಲಿಂದು ಶೃಂಗೇರಿ ಜಗದ್ಗುರುಗಳು ಸಹ ತಮ್ಮ ವಿಡಿಯೋ ಸಂದೇಶ ನೀಡಿದರು.

ಭಾನುವಾರ ಮಧ್ಯಾಹ್ನ 3 ರಿಂದ 5 ಗಂಟೆವರೆಗೆ ಕಾಶಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಹತ್ತು ಸಹಸ್ರ ಭಕ್ತರಿಂದ ಸಂಕರಾಚಾರ್ಯ ವಿರಚಿತ ಸೌಂದರ್ಯಲಹರಿ ಸ್ತೋತ್ರದ ಸಾಮೂಹಿಕ ಪರಾಯಣ ನಡೆಯಲಿದೆ. ಈ ಭವ್ಯ ಧಾರ್ಮಿಕ ಸಮಾವೇಶವನ್ನು ಹರಿಬ್ರಹ್ಮಾನಂದ ಸ್ವಾಮೀಜಿ, ಉತ್ತರ ಕಾಶಿಯ ಆದಿ ಶಂಕರ ಬ್ರಹ್ಮ ವಿದ್ಯಾಪೀಠ, ಮುಂಬಯಿಯ ಮಹಾಮಂಡಲೇಶ್ವರ ಶ್ರೀ ಚಿದಾನಂದ ಸರಸ್ವತಿ ಮಹಾರಾಜ್ ಚಿದ್ಯಾನಮ್ ಆಶ್ರಮದಿಂದ ಆಯೋಜಿಸಲಾಗಿದೆ.

Leave a Reply