ಬೆಂಗಳೂರುರಾಜಕೀಯರಾಜ್ಯ

ಕಾಂಗ್ರೆಸ್ ನಿಂದ ಎಚ್.ಎಂ. ಗೋಪಿಕೃಷ್ಣ ಅವರಿಗೆ ಟಿಕೆಟ್ ನೀಡಿ

ಬೆಂಗಳೂರು; ತರಿಕೆರಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಹೆಚ್.ಎಂ. ಗೋಪಿಕೃಷ್ಣ ಅವರಿಗೆ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಕರ್ನಾಟಕ ರಾಜ್ಯ ಮಡಿವಾಳರ ಜನ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಎಚ್.ಎಲ್. ಕೆಂಪಶೆಟ್ಟಿ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್.ಎಂ. ಗೋಪಿಕೃಷ್ಣ 2013 ಮತ್ತು 2018ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದು, ಇದೀಗ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ಅಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಜನ ಸೇವೆ ಮೂಲಕ ವ್ಯಾಪಕ ಬೆಂಬಲ ಹೊಂದಿದ್ದಾರೆ. ಜನಪರ ಮತ್ತು ಜನಾನುರಾಗಿಯಾಗಿರುವ ಇವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಬೆಂಬಲಿಸಿದರೆ ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ ಎಂದರು.

ಹೆಚ್.ಎಂ. ಗೋಪಿಕೃಷ್ಣ ಕಾಂಗ್ರೆಸ್ ನಲ್ಲಿ ಮಡಿವಾಳ ಸಮಾಜದ ಏಕೈಕ ಸಕ್ರಿಯ ರಾಜಕಾರಣಿ. ಸದಸ್ಯತ್ವ ಅಭಿಯಾನದಲ್ಲಿ 20ಸಾವಿರಕ್ಕೂ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿದ್ದಾರೆ. ಆದರೆ ಎಲ್ಲಾ ಪಕ್ಷಗಳು ಮಡಿವಾಳ ಜನಾಂಗದ ಯುವ ನಾಯಕರನ್ನು ಪಕ್ಷದ ಸಂಘಟನೆಗೆ ದುಡಿಸಿಕೊಂಡು ರಾಜಕೀಯ ಸ್ಥಾನ ಮಾನ ನೀಡದೇ ನಿರ್ಲಕ್ಷಿಸುತ್ತಿವೆ. ಆದರೆ ಕಾಂಗ್ರೆಸ್ ಈ ಬಾರಿ ಅವಕಾಶ ಕಲ್ಪಿಸಿದರೆ ಗೆಲ್ಲುವ ಎಲ್ಲಾ ಅವಕಾಶಗಳಿವೆ ಎಂದು ಹೇಳಿದರು.

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯಕ್ಕೆ ಕಾಂಗ್ರೆಸ್ ನಿಂದ ನ್ಯಾಯ ಸಿಗುವ ವಿಶ್ವಾಸವಿದೆ. ಹಿಂದುಳಿದ ಕಾಯಕ ಸಮಾಜಗಳಿಗೆ ಕಾಂಗ್ರೆಸ್ ರಾಜಕೀಯ ಶಕ್ತಿ ನೀಡುತ್ತದೆ ಎಂಬ ವಿಶ್ವಾಸವಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಚ್.ಎಂ.ಗೋಪಿಕೃಷ್ಣ ಅವರ ಪರವಾಗಿ ಒಲವು ತೋರಬೇಕು. ಉತ್ತಮ ನಿರ್ಧಾರ ಕೈಗೊಂಡರೆ ರಾಜ್ಯದ ಸಮಗ್ರ ಮಡಿವಾಳ ಸಮಾಜ ಕಾಂಗ್ರೆಸ್ ಪಕ್ಷವನ್ನು ಅಖಂಡವಾಗಿ ಬೆಂಬಲಿಸುತ್ತದೆ ಎಂದರು.

ಕುತಂತ್ರ ರಾಜಕಾರಣದಿಂದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದರೆ ಅದಕ್ಕೆ ರಾಜ್ಯ ಮುಖಂಡರೇ ಹೊಣೆಯಾಗಬೇಕಾಗುತ್ತದೆ. ಗೆಲ್ಲುವ ಅವಕಾಶವನ್ನು ಕಾಂಗ್ರೆಸ್ ಕೈ ಚೆಲ್ಲಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಚಿಕ್ಕಹೊನ್ನಶೆಟ್ಟಿ ಉಪಸ್ಥಿತರಿದ್ದರು

Leave a Reply