ಡಿ.ಕೆ. ಶಿವಕುಮಾರ್

ರಾಜ್ಯದ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. ಇಡೀ ರಾಜ್ಯದ ಜನತೆ ಶಿವರಾತ್ರಿ ಆಚರಿಸುವ ಸಂದರ್ಭದಲ್ಲಿ ನಾವು ಬೆಂಗಳೂರು ಜನರು ಹಾಗೂ ಕಾವೇರಿ ಜಲಾನಯನ ಪ್ರದೇಶದ ಜನರ ಬದುಕಿನ ರಕ್ಷಣೆಗಾಗಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮ ಪಾದಯಾತ್ರೆ ಈಗ ಬೆಂಗಳೂರು ನಗರ ಪ್ರವೇಶಿಸಿದೆ. ಪೊಲೀಸ್ ಅಧಿಕಾರಿಗಳು, ಪಾಲಿಕೆ ಜಂಟಿ ಆಯುಕ್ತರು ಹಾಗೂ ಅಧಿಕಾರಿಗಳು ನಮ್ಮ ಬ್ಯಾನರ್ ಕಿತ್ತು ಹಾಕಿದ್ದಾರೆ. ನಮ್ಮ ಕೆಲ ನಾಯಕರು ಅದನ್ನು ತಡೆದಿದ್ದಾರೆ. ನಮ್ಮ ಬ್ಯಾನರ್ ತೆಗೆಸಲು ಪ್ರಯತ್ನ ಮಾಡಿದರೆ, ನಮ್ಮ ಕಾರ್ಯಕರ್ತರಿಗೆ ಹೇಳಿ ಯಡಿಯೂರಪ್ಪನವರಿಂದ ಹಿಡಿದು ಬೇರೆ ಬಿಜೆಪಿ ನಾಯಕರವರೆಗೂ ಅವರ ಬ್ಯಾನರ್ ಗಳನ್ನು ಕಿತ್ತು ಹಾಕಿಸುತ್ತೇವೆ. ಕಾನೂನು ಎಲ್ಲರಿಗೂ ಒಂದೇ. ಒಬ್ಬರಿಗೆ ಒಂದು, ಮತ್ತೊಬ್ಬರಿಗೊಂದು ಕಾನೂನು ಮಾಡಲು ಸಾಧ್ಯವಿಲ್ಲ. ಆದರೂ ನಮ್ಮ ವಿರುದ್ಧ ರಾಜಕೀಯ ದ್ವೇಷದಿಂದ ಈ ಹೋರಾಟ ಮಾಡಬಾರದು ಎಂದು ನಿರ್ಬಂಧ ಹಾಕಿ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪನವರ ಹುಟ್ಟುಹಬ್ಬ, ಅಶ್ವತ್ಥ್ ನಾರಾಯಣ, ಸೋಮಣ್ಣನವರ ಹುಟ್ಟುಹಬ್ಬ, ಬೊಮ್ಮನಹಳ್ಳಿಯಲ್ಲಿ ಸಿಎಂ ಕಾರ್ಯಕ್ರಮ ಆಯೋಜಿಸಿ ಬ್ಯಾನರ್ ಹಾಕಿದ್ದಾರೆ. ಇವರಿಗೆಲ್ಲ ಅನುಮತಿ ಕೊಟ್ಟವರು ಯಾರು? ಅವರಿಗೆ ಕಾನೂನು ಅನ್ವಯ ಆಗುವುದಿಲ್ಲವೇ?

ಗೌರವ್ ಗುಪ್ತಾ ಅವರೇ ಪಾಲಿಕೆ ಕಚೇರಿಗೆ ಬಿಜೆಪಿ ಕಚೇರಿ ಎಂದು ಬೋರ್ಡ್ ಹಾಕಿಕೊಳ್ಳಿ. ಆಗ ನಾವು ಬಿಜೆಪಿ ಕಚೇರಿ ಎಂದು ಸಂತೋಷ ಪಡುತ್ತೇವೆ. ನಮ್ಮ ಕಾರ್ಯಕರ್ತರು ಬ್ಯಾನರ್ ಗಳನ್ನು ಒಂದು ದಿನ ಹಾಕಿ ನಂತರ ಅದನ್ನು ಬಿಚ್ಚಿ ಹಾಕುತ್ತಾರೆ. ನಾವು ಬಲೂನ್ ಮೂಲಕ ಆಕಾಶದಲ್ಲಿ ಬ್ಯಾನರ್ ಹಾರಿಸುತ್ತಿದ್ದು, ಅದನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲ. ನಮ್ಮ ಆಚಾರ, ವಿಚಾರ, ಪ್ರಚಾರ ಮಾಡಲು ನಾವು ಇವುಗಳನ್ನು ಹಾಕಿದ್ದೇವೆ. ಹೋರ್ಡಿಂಗ್ ವಿಚಾರವಾಗಿ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ನೀತಿ ರೂಪಿಸಲು ನಿಮ್ಮಿಂದ ಆಗಿಲ್ಲ. ನಾನು ಬೆಂಗಳೂರು ಜನರ ಕ್ಷಮೆ ಕೇಳಲು ಬಯಸುತ್ತೇನೆ. ಮುಂದಿನ 3 ದಿನ ಟ್ರಾಫಿಕ್ ಸಮಸ್ಯೆ ಎದುರಾಗಲಿದೆ. ಈ ಹೋರಾಟದಿಂದ ಮುಂದಿನ 50 ವರ್ಷ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಹೀಗಾಗಿ ನೀವು ನಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ. ನಾವು ಬೆಂಗಳೂರಿನ ಜನರಿಗಾಗಿ ಪಾದಯಾತ್ರೆ ಮಾಡುತ್ತಿದ್ದು, ಎಲ್ಲರೂ ಈ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡುತ್ತೇನೆ. ಪಾದಯಾತ್ರೆಗೆ ಅಪಾರ್ಟ್ಮೆಂಟ್ ಸಂಘ, ಕೈಗಾರಿಕೆ, ಕಾರ್ಖಾನೆ ಸಂಘಗಳು ಎಲ್ಲರೂ ಪಕ್ಷಭೇಧ ಮರೆತು ಆಗಮಿಸಿದ್ದಾರೆ. ಎಲ್ಲ ಸಹಕಾರ ಕೊಟ್ಟಿದ್ದಾರೆ. ಟೀಕೆ ಮಾಡುವವರ ಟೀಕೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡಲು ಸಹಕಾರ ನೀಡಬೇಕು ಎಂದು ಐದು ದಿನಗಳ ಪಾದಯಾತ್ರೆಯನ್ನು, 3 ದಿನಗಳಿಗೆ ಇಳಿಸಿದ್ದೇವೆ. ಮಾರ್ಚ್ 3ರಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದ್ದು ಇದರಲ್ಲಿ ಭಾಗವಹಿಸುವ ಎಲ್ಲ ಕಾರ್ಯಕರ್ತರು ಮೆಟ್ರೋ ಮೂಲಕ ಆಗಮಿಸಿ, ಮೆಟ್ರೋ ಮೂಲಕ ತೆರಳಬೇಕು ಎಂದು ಮನವಿ ಮಾಡುತ್ತೇನೆ.

ನ ನ್ನೆ ಪಾದಯಾತ್ರೆಗೆ ಮುರುಘಾಮಠದ ಶ್ರೀಗಳು ಹಾಗೂ ಇತರ ಶ್ರೀಗಳು ಆಗಮಿಸಿ ಬೆಂಬಲ ನೀಡಿ ಆಶೀರ್ವಾದ ಮಾಡಿದರು. ವಿಶೇಷವಾಗಿ ಮುರುಘಾಮಠದ ಶ್ರೀಗಳು ಹಾಗೂ ಅವರ ಶ್ರೀಗಳಿಗೆ ಅಭಿನಂದನೆಗಳು. ಮಾರ್ಚ್ 3ರಂದು ಅಂತಿಮ ದಿನ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಎಲ್ಲರಿಗೂ ಅವಕಾಶ ಇದ್ದು, ರಾಜ್ಯದ ಮೂಲೆ ಮೂಲೆಯಿಂದ ಎಲ್ಲರೂ ಪಾದಯಾತ್ರೆಗೆ ಬಂದು ಹೆಜ್ಜೆ ಹಾಕಬಹುದು. ಅಂದು ಅರಮನೆ ಮೈದಾನದಿಂದ ಪಾದಯಾತ್ರೆ ನಡೆಯಲಿದೆ.

ಪ್ರಶ್ನೋತ್ತರ

ಕಾಂಗ್ರೆಸ್ ಹೋರಾಟದಿಂದ ಸುಪ್ರೀಂಕೋರ್ಟ್ ಹೋರಾಟದಲ್ಲಿ ರಾಜ್ಯಕ್ಕೆ ಹಿನ್ನಡೆ ಯಾಗಲಿದೆ ಎಂಬ ಗೋವಿಂದ ಕಾರಜೋಳ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಕುಡಿಯುವ ನೀರಿನ ಯೋಜನೆಗೆ ಯಾವುದೇ ಅಡ್ಡಿ ಇಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ನಾವು ಜಲಸಂಪನ್ಮೂಲ ಸಚಿವರಾಗಿದ್ದು, ನಮಗೂ ಅಲ್ಪ ಸ್ವಲ್ಪ ಪರಿಜ್ಞಾನ ಇದೆ. ಗೋವಿಂದ ಕಾರಜೋಳ ಅವರು ತಮ್ಮ ಅಧಿಕಾರಿಗಳನ್ನು ಕರೆದುಕೊಂಡು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲಿ. ಅವರಿಗೆ ಹೋರಾಟ ಮಾಡಿ ಗೊತ್ತಿಲ್ಲ. ಆಡ್ವಾಣಿ ಅವರು ರಥಯಾತ್ರೆ ಮಾಡಿದ್ದು ಬಿಟ್ಟರೆ ಅವರು ಬೇರೆ ಹೋರಾಟ ಮಾಡಿಲ್ಲ. ಆದರೆ ನಮಗೆ ಮಹಾತ್ಮಾ ಗಾಂಧೀಜಿ ಅವರು ಅಹಿಂಸಾ ಮಾರ್ಗದ ಹೋರಾಟ ಹೇಳಿಕೊಟ್ಟಿದ್ದು ಅದು ನಮ್ಮ ರಕ್ತದ ಕಣಗಳಲ್ಲೇ ಬಂದಿದೆ’ ಎಂದು ತಿರುಗೇಟು ನೀಡಿದರು.

ಕೋವಿಡ್ ನಿರ್ಬಂಧ ಹಿಂಪಡೆಯುವಂತೆ ಕೇಂದ್ರ ಸರ್ಕಾರ ಆದೇಶ ಮಾಡಿದ್ದರೂ ರಾಜ್ಯ ಸರ್ಕಾರ ಅದನ್ನು ಪಾಲಿಸದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬಿಜೆಪಿಯವರಿಗೆ ರಾಜಕಾರಣ ಮುಖ್ಯ. ನಮ್ಮ ಹೋರಾಟ ನಿಲ್ಲಿಸಲು ಈ ರೀತಿ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಇಲ್ಲದ ಅಧಿಸೂಚನೆ ನಾವು ರಾಜಕೀಯ ಸಮಾವೇಶ ಮಾಡುವಂತಿಲ್ಲ ಎಂದು ಕೊಟ್ಟಿದ್ದಾರೆ. ಅವರು ಶಿವಮೊಗ್ಗದಲ್ಲಿ ಮೆರವಣಿಗೆ ಮಾಡಲಿಲ್ಲವೇ? ಬಜರಂಗದಲದವರು ಹಾಗೂ ಬಿಜೆಪಿಯವರು ಟೌನ್ ಹಾಲ್ ಬಳಿ ಯಾಕೆ ಸಮಾವೇಶ ಮಾಡಿದರು? ಇಂದು ಬೊಮ್ಮನಹಳ್ಳಿಯಲ್ಲಿ ಕ್ರೀಡಾಂಗಣ ಉದ್ಘಾಟನೆ ಮಾಡುತ್ತಿರುವುದೇಕೆ? ನಮಗೆ ಮಾತ್ರ ಈ ನಿರ್ಬಂಧ ಯಾಕೆ? ಈ ಕೇಸ್, ಜೈಲಿಗೆಲ್ಲ ನಾವು ಹೆದರುವುದಿಲ್ಲ. ರಾಜ್ಯದಲ್ಲಿ ಅವರು ಏನೆಲ್ಲಾ ಮಾಡಿದ್ದಾರೆ ಎಂದು ಕಾರ್ಯಕರ್ತರಿಂದ ಪಟ್ಟಿ ತರಿಸಿ ಅವರ ಮುಂದೆ ಇಡುತ್ತೇನೆ. ಈ ವಿಚಾರವಾಗಿಯೇ ಹೋರಾಟ ಮಾಡುತ್ತೇವೆ. ಪೊಲೀಸ್ ಅಧಿಕಾರಿಗಳು ಸಮವಸ್ತ್ರ ತೆಗೆದು ಬಿಜೆಪಿಯವರ ಬಟ್ಟೆ ತೊಟ್ಟುಕೊಳ್ಳಲಿ. ಪೊಲೀಸ್ ಅಧಿಕಾರಿಗಳು ಒಂದು ವಿಚಾರ ಗಮನದಲ್ಲಿಟ್ಟುಕೊಳ್ಳಲಿ, ಸೂರ್ಯ ಹುಟ್ಟುತ್ತಾನೆ ಮುಳುಗುತ್ತಾನೆ, ಇವರುಗಳು ಯಾರೂ ಶಾಶ್ವತವಾಗಿ ಇರುವುದಿಲ್ಲ. ನಮಗೆ ತೊಂದರೆ ನೀಡುತ್ತಿರುವ ಪೋಲೀಸರ ಪಟ್ಟಿ ನಮ್ಮ ಬಳಿ ಇದೆ. ಸಮಯ ಬಂದಾಗ ಉತ್ತರ ನೀಡುತ್ತೇನೆ. ನಮಗೆ ತೊಂದರೆ ನೀಡಬೇಕು ಅಂತಲೇ ಕೇಸ್ ದಾಖಲಿಸುತ್ತಿದ್ದಾರೆ. ಪಾದಯಾತ್ರೆಯಲ್ಲಿ ಕೇವಲ 40 ಜನ ಮಾತ್ರ ಭಾಗವಹಿಸಿದ್ದೇವೆಯೇ? ಭಾಗವಹಿಸಿರುವ ಎಲ್ಲ 10 ಸಾವಿರ ಜನರ ಪಟ್ಟಿ ನೀಡುತ್ತೇವೆ ಕೇಸ್ ದಾಖಲಿಸಲಿ’ ಎಂದು ಎಚ್ಚರಿಸಿದರು.

ಶಿವಮೊಗ್ಗದಲ್ಲಿ ಸ್ಥಳೀಯ ಶಾಸಕರಾದ ಕಾರಣ ಈಶ್ವರಪ್ಪ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿದ್ದರು ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಅವರ ಸಮರ್ಥನೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಆತ ಗೃಹ ಸಚಿವ ಸ್ಥಾನಕ್ಕೆ ಅನರ್ಹ. ಅವರು ಸ್ಥಳೀಯ ಶಾಸಕರಾಗಿದ್ದರೆ ನೇರವಾಗಿ ಅವರ ಮನೆಗೆ ಹೋಗಿ ಸಾಂತ್ವಾನ ಹೇಳಬೇಕು. ನಿಷೇಧಾಜ್ಞೆ ಇದ್ದರೂ ಮೆರವಣಿಗೆ ಮಾಡಿದ್ದೇಕೆ. ಎಲ್ಲ ಗಲಭೆಗೂ ಅವರೇ ಕಾರಣ’ ಎಂದರು.

ಹತ್ಯೆಯಾದ ಹರ್ಷ ಮನೆಗೆ ಕಾಂಗ್ರೆಸ್ ನಾಯಕರು ಹೋಗಿಲ್ಲ ಎಂಬ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ‘ನಾವು ಯಾರಿಂದಲೂ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನಾನು ನಮ್ಮ ಜಿಲ್ಲಾಧ್ಯಕ್ಷರ ಜತೆ ಮಾತನಾಡಿದ್ದೇನೆ. ಈ ಎಲ್ಲ ಹೋರಾಟ ಮುಗಿದ ಬಳಿಕ ನಾನೂ ಕೂಡ ಆ ಯುವಕನ ಮನೆಗೆ ಹೋಗಿ ಭೇಟಿ ನೀಡುತ್ತೇನೆ. ಆತನು ನಮ್ಮ ಹುಡುಗ, ತಪ್ಪುಗಳಾಗಿರಬಹುದು ಆದರೆ ಯಾರೂ ಯಾರನ್ನು ಹತ್ಯೆ ಮಾಡಬಾರದು. ಕಾನೂನಿನಲ್ಲಿ ಅದಕ್ಕೆ ಅವಕಾಶ ಇಲ್ಲ. ನಾವು ಅದನ್ನು ಖಂಡಿಸುತ್ತೇವೆ’ ಎಂದರು.

ಡಿ.ಕೆ. ಶಿವಕುಮಾರ ಪಾದಯಾತ್ರೆ ಮೂಲಕ ಅವರ ಅಕ್ರಮ ಹಣವನ್ನು ಪ್ರದರ್ಶಿಸುತ್ತಿದ್ದಾರೆ, ಬಿರಿಯಾನಿ ತಿಂದು ಪಾದಯಾತ್ರೆ ಮಾಡುವುದು ಯಾವ ಹೋರಾಟ ಎಂಬ ಶ್ರೀನಿವಾಸ ಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ‘ನಾನು ಶ್ರೀನಿವಾಸ್ ಪ್ರಸಾದ್ ಅವರ ಬಳಿ ಹೋಗಿ ಅವರ ಹಿತವಚನ ಕೇಳಿ, ಕಳಿತುಕೊಳ್ಳುತ್ತೇನೆ’ ಎಂದರು.

ಬೆಳ್ತಂಗಡಿಯಲ್ಲಿ ಹತ್ಯೆಯಾದ ದಲಿತ ಯುವಕನ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಿಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಹತ್ಯೆಯಾದ ಯುವಕನ ಮನೆಗೆ ಹೋಗುವುದಿರಲಿ, ಸರಿಯಾಗಿ ಪ್ರಕರಣ ದಾಖಲಿಸಿ ಕ್ರಮವನ್ನೇ ಕೈಗೊಳ್ಳುತ್ತಿಲ್ಲ. ಇದೇ ಕಾರಣಕ್ಕೆ ಪೊಲೀಸರು ಖಾಕಿ ಸಮವಸ್ತ್ರ ತ್ಯಜಿಸಿ ಬಿಜೆಪಿ ಬಟ್ಟೆ ಧರಿಸಲಿ’ ಎಂದರು.

ಬೆಂಗಳೂರಿನಲ್ಲಿ ಪೊಲೀಸ್ ಸರ್ಪಗಾವಲು ನಿಯೋಜನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಬಿಜೆಪಿಯವರು ಪೊಲೀಸ್ ಅವರನ್ನಾದರೂ ನಿಯೋಜಿಸಲಿ, ಕಾರ್ಯಕರ್ತರನ್ನಾದರೂ ನಿಯೋಜಿಸಲಿ. ನಾವು ಶಾಂತಿ ಪ್ರಿಯರು, ನೀರಿಗಾಗಿ ಹೆಜ್ಜೆ ಹಾಕುತ್ತಿದ್ದು. ಅವರ ಕರ್ತವ್ಯ ಅವರು ಮಾಡಲಿ ನಮ್ಮ ಅಭ್ಯಂತರವಿಲ್ಲ’ ಎಂದರು.

Leave a Comment

Your email address will not be published. Required fields are marked *

Translate »
Scroll to Top