ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ದೇವನಹಳ್ಳಿ,ಮಾ,26 : ಕೋವಿಡ್ ಮಹಾಮಾರಿ, ಲಾಕ್ ಡೌನ್ ಸಂಕಷ್ಟ ಮುಗಿದು ಈ ವರ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮುಕ್ತ ವಾತಾವರಣ ಸೃಷ್ಟಿಯಾಗಿದ್ದು, ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಸಿದ್ಧರಾಗಿ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್.ಎಲ್. ಶಶಿಕುಮಾರ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕಾಲೇಜಿನ ವತಿಯಿಂದ ಶಾರದಾ ಪೂಜೆ, ದ್ವಿತೀಯ ಪಿ.ಯು. ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಿಸಿ ಮಾತನಾಡಿ, ಕೋವಿಡ್ ಕಾರಣದಿಂದ ಕಳೆದ ವರ್ಷಗಳಲ್ಲಿ ಪರೀಕ್ಷೆ ನಡೆಸಲು ಅವಕಾಶ ಸಿಗಲಿಲ್ಲ. ಈ ಬಾರಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ನಡೆದು ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಈ ಶೈಕ್ಷಣಿಕ ವರ್ಷ ಅತ್ಯಂತ ಯಶಸ್ವಿಯಾಗಿದ್ದು, ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿ ಕಾಲೇಜಿಗೆ ಉತ್ತಮ ಫಲಿತಾಂಶ ನೀಡುವುದರ ಜೊತೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಶ್ರಮವಹಿಸಿ ಎಂದು ತಿಳಿಸಿದರು.

ಅತಿಥಿ ಉಪನ್ಯಾಸಕಿ ಹಾಗೂ ಸಂಪನ್ಮೂಲ ವ್ಯಕ್ತಿ ಎಸ್.ಅಶ್ವಿನಿ ಮಾತನಾಡಿ, ಇಲ್ಲಿನ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ನಿಜಕ್ಕೂ ಮೆಚ್ಚುಗೆ ವ್ಯಕ್ತಪಡಿಸುವಂತದ್ದು. ಕಾಲೇಜು ಸಮಯವನ್ನು ಹೊರತು ಪಡಿಸಿ, ವಿಶೇಷ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವ ಜೊತೆಗೆ ಶಿಕ್ಷಣ ಇಲಾಖೆ ಒದಗಿಸಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಓದಿನ ವಿಚಾರದಲ್ಲಿ ತೋರಿದ ಶ್ರದ್ಧೆ ಶ್ಲಾಘನೀಯ. ವಿಶ್ವಾಸ ಕಿರಣ ಕಾರ್ಯಕ್ರಮದಲ್ಲಿ ತಿಳಿದುಕೊಂಡ ವಿಚಾರಗಳು ಪರೀಕ್ಷಾ ದೃಷ್ಟಿಯಿಂದ ಹೆಚ್ಚು ಅಂಕಗಳಿಸಲು ಉಪಯುಕ್ತವಾಯಿತು ಎಂದಿದ್ದು, ಶಿಕ್ಷಕರ ಶ್ರಮಕ್ಕೆ ಸಾರ್ಥಕ ಭಾವ ತಂದುಕೊಟ್ಟಿತು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡು ಮತ್ತು ನೃತ್ಯದ ಮೂಲಕ ಮನರಂಜಿಸಿದರು. ಇದೇ ವೇದಿಕೆಯಲ್ಲಿ ಅತಿಥಿ ಉಪನ್ಯಾಸಕಿ ಹಾಗೂ ಸಂಪನ್ಮೂಲ ವ್ಯಕ್ತಿಯಾದ ಎಸ್.ಅಶ್ವಿನಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣಸ್ವಾಮಿ, ಸಮಿತಿಯ ಸದಸ್ಯರಾದ ಮೆಹಬೂಬ್ ಪಾಷ, ಮುನಿರಾಜು, ಭುಜೇಂದ್ರ, ನಾರಾಯಣಪುರ ಶಾಲೆಯ ಮುಖ್ಯಶಿಕ್ಷಕ ಪಿ.ಎಂ.ಕೊಟ್ರೇಶ್, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top