ಅಂಗವಿಕಲರಿಗೆ ಉಚಿತ ಗಾಲಿ ಕುರ್ಚಿ

ಮರಿಯಮ್ಮನ ಹಳ್ಳಿ : ಒಬ್ಬ ವ್ಯಕ್ತಿ ಧೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಪರಿಪೂರ್ಣವಾಗಿರುವ ಸುಂದರ ಅವಸ್ಥೆಯೇ ಆರೋಗ್ಯ ಇದು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವ್ಯಾಖ್ಯಾನ. ಆರೋಗ್ಯವೆಂಬುವುದು ನಮ್ಮೆಲ್ಲಾ ಅವಶ್ಯಕತೆಗಳಲ್ಲೊಂದಾಗಿದ್ದು ಪ್ರತಿಯೊಬ್ಬರೂ ಆರೋಗ್ಯದಿಂದಿರಬೇಕೆಂದು ಬಿ.ಎಂ.ಎಂ.ಇಸ್ಪಾತ್ ಕಂಪನಿಯ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಮುಖ್ಯಸ್ಥರಾದ ಗಣೇಶ್ ಹೆಗಡೆ ರವರು ನುಡಿದರು. ಅವರು ಪಟ್ಟಣ ಸಮೀಪದ ತುಂಗ ಭದ್ರಾ ಅತಿಥಿ ಗೃಹದಲ್ಲಿ ಬಿ.ಎಂ.ಎಂ.ಇಸ್ಪಾತ್ ಕಂಪನಿ ಹಾಗೂ ಜೆ.ಎಸ್.ಡಬ್ಲೂ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆಯ್ದ ಅಂಗವಿಕಲರಿಗೆ ಉಚಿತ ಗಾಲಿ ಕುರ್ಚಿ ಮತ್ತು ಶ್ರವಣ ಸಾಧನ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಅಂಗವಿಕಲತೆ ಶಾಪವಲ್ಲ ಅದೊಂದು ನೂನ್ಯತೆ, ಅಂತವರಿಗೆ ಆತ್ಮಬಲ ತುಂಬುವ ನಿಟ್ಟಿನಲ್ಲಿ ಸರಕಾರದ ಜೊತೆ ಹಲವಾರು ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅಂಗವಿಕಲರಲ್ಲಿಯ ಕೌಶಲ್ಯ ಗುರಿತಿಸಿ ಅವರಿಗೆ ಸಾಮಾಜಿಕ ಭದ್ರತೆ ನೀಡುವ ದಿಶೆಯಲ್ಲಿ ಅವರಿಗೆ ಉತ್ತಮ ಶಿಕ್ಷಣ, ಪುನರ್ವಸತಿ, ಉದ್ಯೋಗಗಳಲ್ಲಿ ಅವಕಾಶ ನೀಡುವುದರ ಜೊತೆ ಸಮಾಜದಲ್ಲಿ ಸಮಾನತೆ ತುಂಬುವ ಗುರುತರಹೊಣೆ ನಮ್ಮೆಲ್ಲರದಾಗಿದೆ ಎಂದ ಅವರು ಅಂಗವಿಕಲರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವು ಬಹು ಮುಖ್ಯವಾಗಿ ನಮ್ಮ ಕಂಪನಿಯ ಸುತ್ತಮುತ್ತಲಿನ ಆಯ್ದ ಒಟ್ಟು 50 ಫಲಾನುಭವಿಗಳಿಗೆ ಗಾಲಿ ಕುರ್ಚಿ ಮತ್ತು 28 ಫಲಾನುಭವಿಗಳಿಗೆ ಶ್ರವಣ ಸಾಧನಗಳನ್ನು ವಿತರಿಸುತ್ತಿದ್ದೇವೆಂದರು. 

ಅಂಗವಿಕಲತೆಯಲ್ಲಿ ಬಹುವಿಧಗಳಿದ್ದು ಬಹುಮುಖ್ಯವಾಗಿ ದೈಹಿಕ ಅಂಗವಿಕಲತೆ, ದೃಷ್ಟಿದೋಷ, ಮಾತಿನ ಮತ್ತು ಭಾಷಾ ಅಂಗವಿಕಲತೆ, ನರಸಂಬಂಧಿ ಅಂಗವಿಕಲತೆ, ರಕ್ತ ಸಂಬಂಧಿ ಅಂಗವಿಕಲತೆ, ಬಹು ಅಂಗ ವೈಖಲ್ಯ,  ಮಾನಸಿಕ ಅಸ್ವಸ್ಥತೆ ಮುಂತಾದವುಗಳು ಇದ್ದು, ಇಂತಹ ವ್ಯಕ್ತಿಗಳಲ್ಲಿ ಆತ್ಮಬಲ ತುಂಬಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಸಮಾಜದ ಪ್ರತಿಯೊಬ್ಬರ ಮೇಲೂ ಇದೆ ಎಂದ ಅವರು ಆರೋಗ್ಯವಂತ ವ್ಯಕ್ತಿಗಳು ಈ ಸಮಾಜದ ಆಸ್ತಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಹಾಯಕ ಶಿಶುಅಭಿವೃದ್ಧಿ ಯೋಜನಾ ಅಧಿಕಾರಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ತಾಲೂಕು ನೋಡಲ್ ಅಧಿಕಾರಿ  ಎಳೆ ನಾಗಪ್ಪ ಮಾತನಾಡಿ, ಬಿ.ಎಂ.ಎಂ.ಕಂಪನಿಯವರು  ಸುತ್ತಮುತ್ತಲಿನ ಗ್ರಾಮಗಳ ತೀರಾ ಅಸಹಾಯಕ ಅಂಗವಿಕಲರನ್ನು ಗುರುತಿಸಿ ಈ ಗಾಲಿ ಕುರ್ಚಿ ಮತ್ತು ಶ್ರವಣ ಸಾಧನಗಳನ್ನು ವಿತರಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ.ಇಂತಹ ಮಕ್ಕಳಿಗೆ ಇನ್ನೂ ಹೆಚ್ಚಿನ ಸಹಕಾರ ನೀಡುವತ್ತ ಬಿ.ಎಂ.ಎಂ.ಕಂಪನಿ ಮುಂದಾಗಲಿ ಎಂದ ಅವರು  ಪ್ರತಿಯೊಬ್ಬ ಫಲಾನುಭವಿಗಳು ತಮ್ಮಲ್ಲಿಯ ನಕಾರಾತ್ಮಕ ಭಾವನೆ ತೊರೆದು, ಆತ್ಮವಿಶ್ವಾಸ, ಛಲದಿಂದ ಬದುಕು ರೂಪಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಬಿ.ಎಂ.ಎಂ.ಇಸ್ಪಾತ್ ಕಂಪನಿಯ ಮುಖ್ಯಕಾರ್ಯ ನಿರ್ವಾಹಕಾಧಿಕಾರಿ ವಿಮಲ್ ಸಿಂಗ್, ವಿ.ಪಿ.ಆಪರೇಶನ್ಸ್‍ನ ಮುಖ್ಯಸ್ಥರಾದ ಮನೀಶ್.ಡಿ.ವರ್ಣೇಕರ್, ಜೆ.ರವಿಕುಮಾರ್ ನಾಯಕ್ ಎಂ.ಆರ್.ಡಬ್ಲೂ. ತಾಲೂಕು ಪಂಚಾಯಿತಿ ಹೊಸಪೇಟೆ, ಬಿ.ಎಂ.ಎಂ.ಇಸ್ಪಾತ್ ಕಂಪನಿಯ ಸಿಬ್ಬಂದಿಗಳಾದ ಮಾರತಿ.ಕೆ. ಮಲ್ಲಿಕಾರ್ಜುನ,ರೇವಣ್ಣ ಹಾಗೂ ಡಿ.ಬಿ.ನಾಯಕ್ ಹಾಜರಿದ್ದರು. ನಂತರ ಆಯ್ದ ಫಲಾನುಭವಿಗಳಿಗೆ ವೇದಿಕೆಯ ಗಣ್ಯರು ಗಾಲಿ ಕುರ್ಚಿ ಮತ್ತು ಶ್ರವಣ ಸಾಧನಗಳನ್ನು ವೇದಿಕೆಯ ಗಣ್ಯರು ವಿತರಿಸಿದರು.

Leave a Comment

Your email address will not be published. Required fields are marked *

Translate »
Scroll to Top