ಎಲ್ಲರೂ ತಪ್ಪದೇ ಮುನ್ನೆಚ್ಚರಿಕೆ ಲಸಿಕೆ ಪಡೆಯಿರಿ

ಬೆಂಗಳೂರು: ಕೋವಿಡ್ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ವೇಗ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ಲಭ್ಯವಾಗಿಸಿದೆ. ಇದು ಕೊರೊನಾ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಪಡಿಸಿದ್ದು, ಏಪ್ರಿಲ್ 10 ರಿಂದ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲಿ 18 ವರ್ಷ ಮೇಲ್ಪಟ್ಟವರು ಏಪ್ರಿಲ್ 10 ರಿಂದ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು. 18 ವರ್ಷ ಮೇಲ್ಪಟ್ಟವರು ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣವಾಗಿದ್ದಲ್ಲಿ, ಈ ಡೋಸ್ ಪಡೆಯಬಹುದು ಎಂದು ಸಚಿವರು ತಿಳಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ರೋಗ ಪೂರ್ವ ನಿಯಂತ್ರಣ ಕ್ರಮಗಳಿಗೆ ಹೆಚ್ಚು ಒತ್ತು ನೀಡಿದೆ. ಇದೇ ರೀತಿ ಕೋವಿಡ್ ಲಸಿಕಾಕರಣಕ್ಕೂ ವೇಗ ನೀಡಿದ್ದು, ದೇಶದಲ್ಲಿ ಈವರೆಗೆ 185 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ನಮ್ಮ ಸರ್ಕಾರ ಲಸಿಕಾಕರಣವನ್ನು ಚುರುಕುಗೊಳಿಸಿರುವುದರಿಂದ, ಈವರೆಗೆ 10.47 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದರ ಜೊತೆಗೆ, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60+ ವಯಸ್ಸಿನ ನಾಗರಿಕರಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.

ರಾಜ್ಯದಲ್ಲಿ ಈವರೆಗೆ, 12-14 ವಯೋಮಾನದವರಿಗೆ 13,27,985 ಮೊದಲ ಡೋಸ್ (65.6%), 15-17 ವಯೋಮಾನದವರಿಗೆ 25,09,276 ಮೊದಲ ಡೋಸ್ (79%) ಹಾಗೂ 20,48,576 ಎರಡನೇ ಡೋಸ್ (64.5%) ನೀಡಲಾಗಿದೆ. ಈವರೆಗೆ 15+ ವಯೋಮಾನದವರಿಗೆ 5,23,05,424 ಮೊದಲ ಡೋಸ್ (100.4%) ಹಾಗೂ 4,97,08,909 ಎರಡನೇ ಡೋಸ್ (95.4%) ನೀಡಲಾಗಿದೆ. 18+ ವಯೋಮಾನದವರಿಗೆ 4,97,96,148 ಮೊದಲ ಡೋಸ್ (101.8%) ಹಾಗೂ 4,76,60,333 ಎರಡನೇ ಡೋಸ್ (97.4%) ನೀಡಲಾಗಿದೆ. ಈವರೆಗೆ 14,24,433 (57.6%) ಮುನ್ನೆಚ್ಚರಿಕೆ ಲಸಿಕೆ ಡೋಸ್ ನೀಡಲಾಗಿದೆ. ಈ ಮೂಲಕ ರಾಜ್ಯವು ಲಸಿಕಾಕರಣದಲ್ಲಿ ಶ್ಲಾಘನೀಯ ಪ್ರಗತಿ ಸಾಧಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.ಕೇಂದ್ರ ಸರ್ಕಾರ ಮಾಡಿಕೊಟ್ಟ ಈ ಅವಕಾಶವನ್ನು ಎಲ್ಲರೂ ತಪ್ಪದೇ ಬಳಸಿಕೊಂಡು ಮುನ್ನೆಚ್ಚರಿಕೆ ಲಸಿಕೆ ಪಡೆಯಬೇಕು. ಎರಡು ಡೋಸ್‍ಗಳಂತೆ ಮುನ್ನೆಚ್ಚರಿಕೆ ಡೋಸ್ ಕೂಡ ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಜೊತೆಗೆ ಕೋವಿಡ್ ಸುರಕ್ಷತಾ ಕ್ರಮಗಳನ್ನೂ ಪಾಲಿಸಬೇಕು ಎಂದು ಸಚಿವರು ಕೋರಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top