ನಾನು ಕೂಡ ನಗರಾಭಿವೃದ್ಧಿ ಸಚಿವನಾಗಿದ್ದೆ

ಬೆಂಗಳೂರು : ಇಡೀ ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ ಶಕ್ತಿ ತುಂಬಿದ್ದು ಎಂದರೆ ಅದು ಎಸ್.ಎಂ. ಕೃಷ್ಣ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ. ಆಗ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ ದೊಡ್ಡ ಉದ್ದಿಮೆಗಳನ್ನು ರಾಜ್ಯಕ್ಕೆ ತರಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆಗೆ ಆಗಮಿಸಿದ್ದಾಗ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ, ‘ವಿಶ್ವದ ನಾಯಕರು ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ತೆರಳುತ್ತಾರೆ’ ಎಂದು ಹೇಳಿದ್ದರು. ನಾನು ಕೂಡ ನಗರಾಭಿವೃದ್ಧಿ ಸಚಿವನಾಗಿದ್ದೆ. ಆಂಧ್ರಪ್ರದೇಶದವರು ಕೂಡ ಕಳೆದ 15 ವರ್ಷದಿಂದ ಅಭಿವೃದ್ಧಿ ಕಾರ್ಯಗಳ ಮೂಲಕ ನಮ್ಮ ಜತೆ ಸ್ಪರ್ಧೆಗೆ ನಿಂತಿದ್ದಾರೆ. ದೊಡ್ಡ ಉದ್ಯಮಿಗಳನ್ನು ಅವರು ಆಕರ್ಷಿಸುತ್ತಿದ್ದಾರೆ. ಅದು ಅವರ ಕಾರ್ಯ. ನಾನು ಅದನ್ನು ಪ್ರಶ್ನಿಸುವುದಿಲ್ಲ. ನಮ್ಮ ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿರುವ ಉದ್ಯಮಿಗಳಿಗೆ ಅವರು ತಮ್ಮ ರಾಜ್ಯಕ್ಕೆ ಬನ್ನಿ ಎಂದು ಕರೆಯುತ್ತಿದ್ದಾರೆ. ಈ ಸಮಯದಲ್ಲಿ ಮುಖ್ಯಮಂತ್ರಿಗಳಾಗಲಿ, ಬೇರೆ ಮಂತ್ರಿಗಳಾಗಲಿ ಯಾರೂ ಕೂಡ ನಮ್ಮ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತೇವೆ, ಇಲ್ಲೇ ಉದ್ಯೋಗ ಸೃಷ್ಟಿಸಿ ಯಾರನ್ನೂ ಬೇರೆ ರಾಜ್ಯಗಳಿಗೆ ಹೋಗಲು ಬಿಡುವುದಿಲ್ಲ ಎಂದು ಹೇಳಲು ಸಾಧ್ಯವಾಗಿಲ್ಲ.

ಬಿಜೆಪಿಯವರು ಅವರಿಗೆ ಉತ್ತರ ನೀಡದೆ ನನ್ನ ಟ್ವೀಟ್ ಗೆ ಉತ್ತರಿಸುತ್ತಾರೆ. ಅವರು ಏನು ಬೇಕಾದರೂ ಹೇಳಲಿ. ನನಗೆ ಕರ್ನಾಟಕ ರಾಜ್ಯ ಮುಖ್ಯ. ಇಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಿ, ಉದ್ಯೋಗ ಸೃಷ್ಟಿಸುವುದು ನಮ್ಮ ಮೊದಲ ಆದ್ಯತೆ. ಇಡೀ ರಾಜ್ಯದಲ್ಲಿ 66 ಮೆಡಿಕಲ್ ಕಾಲೇಜುಗಳಿವೆ. ಉಡುಪಿಯ ಒಂದೇ ಪಂಚಾಯ್ತಿಯಲ್ಲಿ 3 ಮೆಡಿಕಲ್ ಕಾಲೇಜುಗಳಿವೆ. ಎಷ್ಟೋ ಎಂಜಿನಿಯರ್, ತಂತ್ರಜ್ಞರನ್ನು, ವೈದ್ಯರನ್ನು ತಯಾರು ಮಾಡಿರುವ ರಾಜ್ಯ ಇದು. ನವೋದ್ಯಮ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದ ರಾಜಧಾನಿ ಬೆಂಗಳೂರು. ಬಯೋಕಾನ್ ಮುಖ್ಯಸ್ಥೆ ರಾಜ್ಯದ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾರೆ ಎಂದರೆ ಅದಕ್ಕೆ ಉತ್ತರ ಕೊಡಲು ಒಬ್ಬರಿಗೂ ಸಾಧ್ಯವಾಗಿಲ್ಲ. ಅವರನ್ನು ರಾಜಕೀಯ ಪಕ್ಷದ ಭಾಗ ಎಂದು ಹೇಳಿದರು. ಅವರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಇನ್ಫೋಸಿಸ್, ರಾಜೀವ್ ಚಂದ್ರಶೇಖರ್ ಸೇರಿದಂತೆ ಎಲ್ಲರೂ ಕೂಡ ಸರ್ಕಾರಕ್ಕೆ ಸಲಹೆ ನೀಡಿದ್ದವರು. ಅದು ರಾಜಕೀಯ ತಂಡವಾಗಿರಲಿಲ್ಲ. ಇವರು ಕೂಡ ಅನೇಕರಿಂದ ಸಲಹೆ ಪಡೆದಿದ್ದಾರೆ. ಅದು ತಪ್ಪಲ್ಲ. ಇವರ ಮಂತ್ರಿಗಳು ಏನಾದರೂ ಹೇಳಲಿ ನಾನು ಅವರಿಗೆ ಸೊಪ್ಪು ಹಾಕಲ್ಲ, ಲೆಕ್ಕಿಸುವುದಿಲ್ಲ. ನನಗೆ ರಾಜ್ಯದ ಹಿತ ಹಾಗೂ ಗೌರವ ಕಾಪಾಡುವುದು ಮುಖ್ಯ.

ರಾಜ್ಯದಲ್ಲಿ ದಿನಬೆಳಗಾದರೆ ಅಶಾಂತಿ ಮೂಡುತ್ತಿದ್ದು, ಯಾರೂ ಕೂಡ ಬಂಡವಾಳ ಹೂಡಿಕೆ ಮಾಡಲು ಇಲ್ಲಿಗೆ ಬರುತ್ತಿಲ್ಲ. ನಾವು ನೆರೆ ರಾಜ್ಯಗಳ ಜತೆ ಸ್ಪರ್ಧೆ ಮಾಡುತ್ತೇವೆ. ಇಲ್ಲಿಂದ ಬೇರೆ ರಾಜ್ಯಗಳಿಗೆ ಎಷ್ಟು ಉದ್ದಿಮೆಗಳು ಹೋಗಿವೆ ಎಂದು ಸರ್ಕಾರ ಸಮೀಕ್ಷೆ ಮಾಡಲಿ. ನಾನು ನಮ್ಮ ಜನರಿಗೆ ಭರವಸೆ ನೀಡುವ ಕೆಲಸ ಮಾಡಿದ್ದೇನೆ. ರಾಜ್ಯ ಒಂದಾಗಿ ಕೆಲಸ ಮಾಡುತ್ತಿದೆಯೇ? ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಇಲ್ಲಿದಾಗಿದೆ. ಕೋವಿಡ್ ಸಮಯದಲ್ಲಿ ಐಟಿ ಹಾಗೂ ಬಿಟಿ ಅವರಿಗೆ ಏನೆಲ್ಲ ಪರ್ಸೆಂಟೇಜ್ ನಿಗದಿ ಆಗಿತ್ತು ಎಂಬುದು ನಮಗೂ ಗೊತ್ತಿದೆ. ಈ ಸರ್ಕಾರ ಪ್ರವಾಸೋದ್ಯಮಿಗಳು ಸೇರಿದಂತೆ ಯಾರಿಗೆ ನೆರವಾಗಿದೆ? ಬೇರೆ ರಾಜ್ಯಗಳಲ್ಲಿ ಅಲ್ಲಿನ ಉದ್ಯಮಿಗಳಿಗೆ ನೆರವು ಸಿಕ್ಕಿತಾದರೂ ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವುದೇ ನೆರವು ನೀಡಲಿಲ್ಲ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರಲ್ಲ, ಈ ಡಬಲ್ ಇಂಜಿನ್ ಸರ್ಕಾರ ಅದನ್ನು ಮಾಡಿತೇ?’

Leave a Comment

Your email address will not be published. Required fields are marked *

Translate »
Scroll to Top