ಜಿಲ್ಲೆಗಳುಬಳ್ಳಾರಿವೀಡಿಯೊಗಳುಹೊಸಪೇಟೆ

ಜಿಂದಾಲ್ ಆಕ್ಸಿಜನ್ ಘಟಕಗಳ ಉತ್ಪಾದನೆ ಪರಿಶೀಲಿಸಿದ ಕೈಗಾರಿಕಾ ಸಚಿವ ಶೆಟ್ಟರ್

ಬಳ್ಳಾರಿ: ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್, ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಜಿಂದಾಲ್ ಕಾರಖಾನೆ ಆವರಣದಲ್ಲಿರುವ ವಿವಿಧ ಘಟಕಗಳಲ್ಲಿ ಆಕ್ಸಿಜನ್ ಉತ್ಪಾದನೆ ಹಾಗೂ ಟ್ಯಾಂಕರ್‌ಗಳಿಗೆ ಆಕ್ಸಿಜನ್ ಭರ್ತಿ ಮಾಡುವ ಪ್ರಕಿಯೆಯನ್ನು ಶನಿವಾರ ಪರಿಶೀಲಿಸಿದರು.

ಆಕ್ಸಿಜನ್ ಉತ್ಪಾದನೆಯ ಮಾಹಿತಿಯನ್ನು ಪಡೆದುಕೊಂಡ ಅವರು ಕೈಗಾರಿಕೆಗೆ ಬಳಸಲಾಗುತ್ತಿರುವ ಆಕ್ಸಿಜನ್ ಪ್ರಮಾಣ ಕಡಿತಗೊಳಿಸಿ ವೈದ್ಯಕೀಯ ಕ್ಷೇತ್ರಕ್ಕೆ ಒದಗಿಸಲು ಸಚಿವ ಜಗದೀಶ ಶೆಟ್ಟರ್ ಅವರು ಸೂಚನೆ ನೀಡಿದರು. ಈಗ ಉತ್ಪಾದಿಸಲಾಗುತ್ತಿರುವ ಆಕ್ಸಿಜನ್ ಪ್ರಮಾಣವನ್ನು ೧ ಸಾವಿರದಿಂದ ೧೨೦೦ ಮೆಟ್ರಿಕ್ ಟನ್‌ವರೆಗೆ ಹೆಚ್ಚಿಸಲು ಜಿಂದಾಲ್ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್‌ಗಿಂತ ಮುಂಚೆ ನಿತ್ಯ ೩೫೦ರಿಂದ ೪೦೦ ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸಿ ಕೈಗಾರಿಕೆ,ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬಳಸಿಕೊಳ್ಳಲಾಗುತ್ತಿತ್ತು;ಕೋವಿಡ್ ಹಿನ್ನಲೆಯಲ್ಲಿ ಹಂತಹಂತವಾಗಿ ಆಕ್ಸಿಜನ್ ಉತ್ಪಾದನಾ ಪ್ರಮಾಣ ಹೆಚ್ಚಿಸಿ ಸದ್ಯ ೯೦೦ ಟನ್‌ವರೆಗೆ ನಿತ್ಯ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ ಎಂದು ಜಿಂದಾಲ್ ಅಧಿಕಾರಿ ಪ್ರಭು ಅವರು ಸಚಿವರಾದ ಶೆಟ್ಟರ್ ಅವರಿಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿರುವ ಈಗಿನ ಸೊಂಕಿನ ಲಕ್ಷಣಗಳನ್ನು ಗಮನಿಸಿದರೇ ನಿತ್ಯ ೧೭೦೦ ಮೆಟ್ರಿಕ್ ಟನ್ ಆಕ್ಸಿಜನ್ ಕರ್ನಾಟಕಕ್ಕೆ ಅಗತ್ಯವಿದೆ;ಕೇಂದ್ರ ಸರಕಾರ ೧೨೦೦ ಮೆಟ್ರಿಕ್ ಟನ್ ಆಕ್ಸಿಜನ್ ಹಂಚಿಕೆ ಮಾಡಲು ಒಪ್ಪಿಕೊಂಡಿದ್ದು,ಅಷ್ಟು ಪ್ರಮಾಣದಲ್ಲಿ ರಾಜ್ಯಕ್ಕೆ ಸರಬರಾಜದಲ್ಲಿ ಉತ್ತಮ ರೀತಿಯಿಂದ ನಿರ್ವಹಣೆ ಮಾಡಬಹುದಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಜಿಂದಾಲ್ ಸೇರಿದಂತೆ ರಾಜ್ಯದ ಇತರ ಉದ್ದಿಮೆಗಳಿಗೂ ಆಕ್ಸಿಜನ್ ಉತ್ಪಾದನಾ ಪ್ರಮಾಣ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ ಮತ್ತು ಭದ್ರವಾತಿ,ರಾಯಚೂರು,ಕೊಪ್ಪಳದಲ್ಲಿ ಸ್ಥಗಿತವಾಗಿರುವ ಆಕ್ಸಿಜನ್ ಉತ್ಪಾದಿಸುವ ಕೈಗಾರಿಕೆಗಳನ್ನು ಪುನಃ ಆರಂಭಿಸಲು ಸೂಚಿಸಲಾಗಿದೆ ಎಂದರು.

Leave a Reply