ಬೆಂಗಳೂರು; ನೈತಿಕ ಶಿಕ್ಷಣ ಎಂಬುದು ಯಾವುದೇ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಕಲಿಸುವುದಿಲ್ಲ, ಸಂಸ್ಕಾರದಿಂದ ಮಾತ್ರ ನೈತಿಕ ಶಿಕ್ಷಣ ಪಡೆಯಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಅರವಿಂದ್ ಕುಮಾರ್ ಹೇಳಿದ್ದಾರೆ.
ಜಯನಗರದ 3ನೇ ಬ್ಲಾಕ್ ನ ವಿಜಯ ಪಿಯು ಕಾಲೇಜು ಹಾಗೂ ಸೌತ್ ಎಂಡ್ ಸರ್ಕಲ್ ಮೆಟ್ರೋ ನಿಲ್ದಾಣದ ಬಳಿಯ ಮೈದಾನದಲ್ಲಿ ಕೆ.ಆರ್. ನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶ್ವರರಾದ ಶಂಕರಭಾರತೀ ಸ್ವಾಮೀಜಿಗಳ ಕರಕಮಲ ಸಂಜಾತರಾದ ಬ್ರಹ್ಮಾನಂದಭಾರತೀ ಸ್ವಾಮಿಗಳ ಬೆಂಗಳೂರು ನಗರ ಪುರ ಪ್ರವೇಶ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ತಂದೆ ತಾಯಿಗಳು ನೈತಿಕ ಶಿಕ್ಷಣ ಕಲಿಸಬೇಕು. ಪ್ರತಿಯೊಬ್ಬರೂ ಮನೆಗಳಲ್ಲಿ ಸತ್ಯ, ಸಂಗೀತ, ನೃತ್ಯ, ಸಂಸ್ಕಾರ, ವೇದ, ಶ್ಲೋಕಗಳನ್ನು ಹೇಳಿಕೊಡಬೇಕು. ಇದರಿಂದ ನೈತಿಕತೆಯ ಪ್ರೇರಣೆ ದೊರೆಯಲಿದೆ ಎಂದರು.
ಪ್ರತಿಯೊಬ್ಬರೂ ಸಂವಿಧಾನದ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಸಂವಿಧಾನದಲ್ಲಿ ಕರ್ತವ್ಯಗಳು ಅತ್ಯಂತ ಮುಖ್ಯ. ಸಂವಿಧಾನದ 54 ಎಫ್ ವಿಧಿಯಲ್ಲಿ ನಮ್ಮ ಕರ್ತವ್ಯಗಳ ಬಗ್ಗೆ ಹೇಳಿದ್ದು, ಅದರಲ್ಲಿ ನಮ್ಮ ಸಂಸ್ಕೃತಿಯ ಮೌಲ್ಯವನ್ನು ಗೌರವಿಸಬೇಕು ಎಂದು ಹೇಳಿದೆ. ಶ‍್ರೀಮಂತ ಸಾಂಪ್ರಾಯಿಕ ಹಾಗೂ ಉನ್ನತ ಸಾಂಸ್ಕೃತಿಕ ಮೌಲ್ಯಗಳಿಂದ ಸಂಸ್ಕೃತಿಯನ್ನು ಉಳಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ನಮ್ಮ ದೇಶದ ಬಗ್ಗೆ ಪ್ರೀತಿ ಮಾಡದಿದ್ದರೆ ಇನ್ನೇನು ಸಾಧಿಸಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಶ್ರೀರಾಮ ಕೂಡ ಎಲ್ಲದಕ್ಕಿಂತ ಜನ್ಮಕೊಟ್ಟ ತಾಯಿ, ಜನ್ಮಕೊಟ್ಟ ಭೂಮಿ ಮುಖ್ಯ ಎಂದು ಹೇಳಿದ್ದ. ಸಂವಿಧಾನದ ಕರ್ತವ್ಯವಾದ ಸತ್ ಸಂಪ್ರದಾಯಗಳನ್ನು ಎಲ್ಲರೂ ಎತ್ತಿ ಹಿಡಿಯಬೇಕು. ನಮ್ಮ ಸಂಸ್ಕೃತಿ, ಪರಂಪರೆ ಇಂದಿನದಲ್ಲ, ಸಿಇಟಿ, ನೀಟ್ ಎಂಬ ವ್ಯವಸ್ಥೆ 1600 ವರ್ಷಗಳಿಗೂ ಮುಂಚೆಯೇ ಇತ್ತು. ನಳಂದ, ತಕ್ಷಶಿಲೆ ವಿವಿಗಳಲ್ಲಿ ಪ್ರವೇಶ ಪಡೆಯಲು 147 ರಾಷ್ಟ್ರಗಳಿಂದ ಬರುತ್ತಿದ್ದರು. ಆಗ ಇಂತಹ ವಿದ್ಯಾರ್ಥಿಗಳನ್ನು ದ್ವಾರಪಾಲಕರು ಐದು ಪ್ರಶ್ನೆಗಳನ್ನು ಕೇಳಿ ಶಿಕ್ಷಣ ಪಡೆಯಲು ಅರ್ಹರೋ ಇಲ್ಲವೋ ಎಂಬುದನ್ನು ನಿರ್ಧರಿಸಿ ವಿವಿ ಆವರಣಕ್ಕೆ ಬಿಟ್ಟುಕೊಳ್ಳುತ್ತಿದ್ದರು. ದ್ವಾರಪಾಲಕರೇ ಅಷ್ಟೊಂದು ಜ್ಞಾನವಂತರಾಗಿದ್ದರೆ ಇನ್ನು ಬೋಧಕರು ಹೇಗಿದ್ದರು ಎಂಬುದು ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದರು.
ಕೆ.ಆರ್. ನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶ್ವರರಾದ ಶಂಕರಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ದೇಶ ಪರ್ಯಟನೆ ಸಾಹಸದಿಂದ ಕೂಡಿತ್ತು. ಪಶ್ಚಿಮ ಬಂಗಾಳ, ಆಸ್ಸಾಂ, ನಾಗಲ್ಯಾಂಡ್, ಮಣಿಪುರ ಮತ್ತಿತರೆ ಪ್ರದೇಶಗಳಲ್ಲಿ ಎದುರಿಸಿದ ಸನ್ನಿವೇಶ, ಅಲ್ಲಿ ವ್ಯಕ್ತವಾದ ಸ್ಪಂದನೆ, ಅಲ್ಲಿನ ಹಿಂದೂ ಪರಿಸ್ಥಿತಿ ಬಗ್ಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದರು.

ಬ್ರಹ್ಮಾನಂದಭಾರತೀ ಸ್ವಾಮೀಜಿಗಳು ಮಾತನಾಡಿ, ವಿವೇಕದಿಂದಲೇ ಬದುಕನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕಾಗುತ್ತದೆ. ಮನುಷ್ಯ ಜನ್ಮ ಅತ್ಯಂತ ದೊಡ್ಡದು. ಇದನ್ನು ನಮ್ಮ ಪುರಾಣ, ಪಣ್ಯಕಥೆಗಳಲ್ಲಿ ಅತ್ಯಂತ ಸಮರ್ಥವಾಗಿ ಪ್ರತಿಪಾದಿಸಲಾಗಿದೆ ಎಂದರು.
ಗೋಕುಲ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಕುಲಪತಿ ಡಾ.ಎಂ.ಆರ್. ಜಯರಾಮ್ ಮಾತನಾಡಿ, ಗುರು ಎಂದರೆ ಜ್ಞಾನ, ಗುರು ಎಂದರೆ ಬೆಳಕು, ಗುರು ಮುಖೇನವೇ ಧರ್ಮ ಬರುತ್ತದೆ. ಪ್ರಪಂಚ ಬದಲಾವಣೆಯಾಗುತ್ತಿದ್ದು, ಮಾನವ, ಪ್ರಕೃತಿ ಸೇರಿದಂತೆ ಪ್ರತಿಯೊಂದು ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪುರ ಪ್ರವೇಶ ಮಾಡಿದ ಬ್ರಹ್ಮಾನಂದಭಾರತೀ ಸ್ವಾಮಿಗಳಂತಹ ಸಂತರು ಧರ್ಮ, ಸತ್ಯ, ಸತ್ಯನಿಷ್ಠೆಯನ್ನು ಎತ್ತಿ ಹಿಡಿಯಲು ದೇಶದ ಪ್ರತಿಯೊಂದು ಮೂಲೆಗಳಿಗೆ ತೆರಳಿ ಅರಿವಿನ ಬೆಳಕು ಮೂಡಿಸಬೇಕು ಎಂದು ಹೇಳಿದರು.
ಸುಮಾರು 700 ಚಿಕ್ಕ ಚಿಕ್ಕ ಮಕ್ಕಳಿಂದ ಕಿಶೋರಸುಧಾ ಎಂಬ ಹೆಸರಿನಲ್ಲಿ ಶ್ಲೋಕಗಳ ಪಾರಾಯಣ ನಡೆಯಿತು. ಸಹಸ್ರಾರು ಭಕ್ತಾದಿಗಳು ಪೂಜ್ಯ ಬ್ರಹ್ಮಾನಂದಭಾರತಿ ಸ್ವಾಮೀಜಿಯವರ ಪುರಪ್ರವೇಶ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.
ವೇದಾಂತಭಾರತಿಯ ಟ್ರಸ್ಟಿಗಳಾದ ಶ್ರೀ ಎಸ್. ಎಸ್. ನಾಗಾನಂದರವರು ಸ್ವಾಗತಿಸಿದರು. ಇನ್ನೊಬ್ಬ ಟ್ರಸ್ಟಿಗಳಾದ ಶ್ರೀ ಸಿ.ಎಸ್. ಗೋಪಾಲಕೃಷ್ಣರವರು ವಂದನಾರ್ಪಣೆ ಮಾಡಿದರು