ಮೈಸೂರು, ಕರುನಾಡ ಸಾಂಸ್ಕೃತಿಕ ಪಯಣದಲ್ಲಿ ಅನನ್ಯ ಚಲನಶೀಲ ನಿಲ್ದಾಣ.. ಕಲಾ ವಲಯದ ಎಲ್ಲ ಮಜಲುಗಳಿಗೂ ಇಲ್ಲಿ ಕಥೆಯಿದೆ, ಕಲಾವಿದರು ರೂಪುತಳೆವಲ್ಲಿ ಈ ನೆಲದ ಘಮವಿದೆ…
ಚೆಂದದ ಅಂಗಳ ಮೈಸೂರನ್ನು ಸಂಭ್ರಮಿಸುವ ದೃಶ್ಯ ಕಾವ್ಯವೇ “ಆರ್ಕೆಸ್ಟ್ರಾ- ಮೈಸೂರು”. ಕ್ಯಾಮರಾ ಕಣ್ಣಲ್ಲಿ ಮೈಸೂರಿನ ಅನಾವರಣ, ಛಾಯಾಗ್ರಾಹಕರ ಕಲಾಕುಸುರಿಯಾಗಿ ಕಣ್ತುಂಬಿ, ಹೃದಯದಲ್ಲಿ ನಮ್ಮೂರಿನ ನೆನಪುಗಳ ಅಲೆಯನ್ನೇ ಎಬ್ಬಿಸಿಬಿಡುವುದು ಉತ್ಪ್ರೇಕ್ಷೆಯಲ್ಲ. ಹಾಂ.. ಇದಕ್ಕಾಗಿ ನೀವು ಮೈಸೂರಿನವರಾಗಿರಬೇಕಿಲ್ಲ, ಈ ಚಿತ್ರ ನಿಮ್ಮ ತವರಿನ ಅಂಗಳದ ಅವ್ಯಕ್ತ ಭಾವವನ್ನು ಹೊಮ್ಮಿಸುತ್ತದೆ, ಸುಳ್ಳಲ್ಲ..

ಚಿತ್ರರಸಿಕರಿಗೆ, ಬೆಳ್ಳಿ ಪರದೆಯ ಮೇಲೆ ಬೆಳಕು ಮೂಡುವ ಘಳಿಗೆಯಿಂದ, ಪ್ರೇಕ್ಷಕರ ಅಂಗಳದಲ್ಲಿ ಬೆಳಕು ಕಾಣುವ ಕ್ಷಣದವರೆಗೂ, ತಮ್ಮದಲ್ಲದ, ಆದರೆ ತಾವೇ ಪಾತ್ರವಾಗಿರುವ ಲೋಕ ತೆರೆದುಕೊಂಡರೆ! ಅದಕ್ಕಿಂತ ಅನಿರ್ವಚನೀಯ ಆನಂದ ಮತ್ತೊಂದಿಲ್ಲ….”ಸಂಕ್ರಾಂತಿಯಲ್ಲಿ ತೆರೆಕಾಣುತ್ತಿರುವ ಈ ಕನ್ನಡ ಸಿನಿಮಾ – “ಆರ್ಕೆಸ್ಟ್ರಾ – ನಮ್ಮ ಮೈಸೂರು”, ಅಂತಹದ್ದೇ ಒಂದು ಅನುಭವ ನೀಡುವ ಸಿನಿಮಾ. ಮೂರು ಗಂಟೆ ನಾವೆಲ್ಲಾ ಪ್ರೇಕ್ಷಕರಲ್ಲ, ಕಲಾ ವಲಯದ ಒಂದು ಭಾಗವಾಗುತ್ತೇವೆ; ಮೈಸೂರಿನ ಸಂದಿಗೊಂದಿಗಳಲ್ಲಿ ಟೀ ಹೀರುವ, ಅಡ್ಡಾಡುವ, ಕಲಾಸಕ್ತರಾಗುತ್ತೇವೆ; ಚಿತ್ರದ ಗೆಲುವಲ್ಲಿ ಕಣ್ಣಾಲಿ ತೇವಗೊಂಡು ನಮ್ಮದೇ ಗೆಲುವೆನ್ನುವಸ್ಟು ಹರ್ಷಿಸುತ್ತೇವೆ…
ಮಾದಪ್ಪ ನುಡಿಸೋ ಡಮರುಗ, ಚಿತ್ರದ ಅಂತ್ಯದ ಒಂದು aesthetic ನಿಶಬ್ದದಲ್ಲಿ ತಕ ತಕ ತಕ ಕುಣಿತೈತೆ, ಇಡೀ ಆವರಣದ ಜಗಜೀವ ಖುಷಿಯಲ್ಲಿ ಮಿಂದು, ಮೌನದ ಮೆಚ್ಚುಗೆ ವ್ಯಕ್ತಪಡಿಸುತ್ತದೆ…

ಇಡೀ ಚಿತ್ರದ ಹಿನ್ನಲೆ ಸಂಗೀತ ಮನಮುಟ್ಟುತ್ತದೆ. ಧನಂಜಯರ ಹಾಡಿನ ಸಾಲುಗಳು ಮತ್ತು ಕೆಲವೇ ನಿಮಿಷದ ತೆರೆಯ ಇಣುಕು ಮನಸ್ಸನ್ನು ಆರ್ದ್ರಗೊಳಿಸಿ, ಕಾಡುವ, ಗುನುಗುವ ಸಾಹಿತ್ಯವನ್ನು ಎದೆಗೆ ರವಾನಿಸಿಬಿಡುತ್ತದೆ. ರಘು ದೀಕ್ಷಿತ್ ಸಂಗೀತ ಸಾರಥ್ಯ, ಎಲ್ಲಾ ಹಿನ್ನಲೆ ಗಾಯಕರ ಮಧುರ ಧ್ವನಿ ನಿಮ್ಮ ear phonegalli ಮುಂದೊಂದಿಷ್ಟು ಕಾಲ ಪ್ರತಿಧ್ವನಿಸುವುದಂತೂ ದಿಟ..

ರಂಗಭೂಮಿಯಲ್ಲೇ ಬದುಕು ಕಟ್ಟಿಕೊಂಡ ನಂತರ ಚಿತ್ರ ಜಗತ್ತಿಗೆ ಪದಾರ್ಪಣೆ ಮಾಡಿರುವ ನಟರ ದಿಬ್ಬಣವೇ ಈ ಚಿತ್ರದ highlight…. ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ… ಪೂರ್ಣ ನಮ್ಮಲ್ಲೇ ಕರಗಿಬಿಟ್ಟರೆ, ರಾಜಿ ಮನೆಮಗಳಾಗುತ್ತಾಳೆ.. ಮಹೇಶನಂತ ಗೆಳೆಯನಿಗಾಗಿ, ಸಚ್ಚುವಿನತ ಮಾರ್ಗದರ್ಶಕನಿಗಾಗಿ, ರಾಜೇಶನಂತ ಅಭಿಮಾನಿಗಾಗಿ ನಾವು ತಲ್ಲಣಿಸುತ್ತೇವೆ.. ರವಿ ಹಾಗು ಕೀಬೋರ್ಡ್ ಕಲಾವಿದನ ತುಮುಲಗಳಲ್ಲಿ ನಾವು ಜೊತೆಯಾಗುತ್ತೇವೆ.. ನವೀನನ ದಾರ್ಷ್ಟ್ಯಕ್ಕೆ ಮೂಗು ಮುರಿದರು, ಆತನ ಅಂತರಂಗದ ಬಯಕೆಗೆ ಸೋಲುತ್ತೇವೆ.. ಎಲ್ಲ ಕಲಾವಿದರ ಪಾತ್ರಕ್ಕೂ ಉಚಿತ space ನೀಡುವಲ್ಲಿ ನಿರ್ದೇಶಕರ, ಚಿತ್ರಕಥೆ ಬರಹಗಾರರ ಕಲ್ಪನೆ ಮತ್ತು ಚಾಕಚಕ್ಯತೆ , ಸಂಕಲನಕಾರನ ಕೈಚಳಕ ಕಥಾ ಓಘದಲ್ಲಿ ಗುರುತಿಸಿಕೊಳ್ಳುತ್ತದೆ. ನಾಗಭೂಷಣನ ಸಮಯ ಪರಿಪಾಲನೆ ಖುಷಿಕೊಡುತ್ತದೆ, ಪರರ ಹಾನಿಯಲ್ಲಿ ವಿಲಕ್ಷಣ ತೃಪ್ತಿ ಗಳಿಸುವ ಶಕುನಿ ಪಾತ್ರಗಳು ಹಿಂಸಿಸುತ್ತವೆ; ಗಾಂಧಿನಗರದ ಅಂತರ ಅರಿವನ್ನು ಎಚ್ಚರಿಸುತ್ತದೆ.. ಎಸ್ ಪಿ ಬಿ, ಮುಖೇಶ್, ಮಂಜುನಾಥ್ ಎಲ್ಲರ ನಿತ್ಯ ಪರದಾಟ ನಗುವಿನೊಂದಿಗೆ ಗಾಢ ಆಲೋಚನೆಗೂ ದಿಕ್ಕು ತೋರುತ್ತದೆ..

ಮೈಸೂರಿನ ಜನಪದ ಕಲೆಗಳ ಹೆಚ್ಚಿನ ಹೊಳಹಿಲ್ಲ ಎಂದು ಕೊಂಚ ಬೇಸರವಾದರೂ, ಸಂಗೀತದ ಗೆಲುವು ಮತ್ತು “ಹಿತ್ತಲ ಗಿಡ ಮದ್ದಲ್ಲ” ಎಂಬ ನಾಣ್ಣುಡಿಗೆ ಹೊರತಾಗದ ಸಂಗೀತ ಅಥವಾ ಕಲಾ ವೇದಿಕೆಗಳ ತಕರಾರು ಹಾಗೂ ಒಳತಿಕ್ಕಾಟಗಳ ಮೂದಲಿಕೆಗೆ ಪ್ರಶಸ್ತ ತಾವು ಒದಗಿರುವುದು ಇಷ್ಟವಾಗುತ್ತದೆ.
ಕೆಲವು ಪಾತ್ರಗಳ ಅಸಮರ್ಥ ಬಳಕೆ ಅಲ್ಲಲ್ಲಿ ಕಂಡು ಬಂದರೂ, ಇಂದಿನ ಯುವ ಜನಾಂಗದ ನಾಡಿ ಮಿಡಿತ “social media” ಸಮರ್ಪಕವಾಗಿ ರಂಗು ಪಡೆದಿದೆ..
ಮಳೆಯಲ್ಲಿ ನೆಂದ ಮನಸ್ಸಿನ ಸಂತಸ, ಬೆಂಗಳೂರಿನಲ್ಲಿರುವ ಮಲೆನಾಡಿಗರಿಗೊದಗುವಂತೆ,ಸಂಗೀತ-ಬಿಗಿ ಕಥೆಯ ಹಿಡಿತ-ಪಾತ್ರಗಳ ಭದ್ರ ಅಭಿನಯದ ಛಾಪು- ಹೊಸಬರ ಪಕ್ವತೆಯ entry ಹೊಂದಿರುವ “ಆರ್ಕೆಸ್ಟ್ರಾ – ನಮ್ಮ ಮೈಸೂರು” ಚಿತ್ರ ವೀಕ್ಷಣೆ, ಹೊಸ ವರುಷದ ಹೊಸ್ತಿಲಲ್ಲಿ ಪ್ರೇಕ್ಷಕರಿಗೆ ಒಂದು sumptuous meal and a visual- audio treat ಆಗಲಿರುವುದಂತೂ ಉತ್ಪ್ರೇಕ್ಷೆಯಲ್ಲ. It is a simple tale told in a beautiful way..
ಹೊಸಬರಿಗೆ ಒಂದು chance ಕೊಡಿ…ಉಹೂಂ… ರಂಗನಟನೆಯ ಮೊಸರಲ್ಲಿ ಚೆಂದವಾಗಿ ಕಡೆದು ತೆಗೆದಿರುವ ಈ ಚಿತ್ರಕಲಾವಿದರ ನವನೀತದ ರುಚಿ ಆಸ್ವಾದಿಸಿ..
ಎಳ್ಳು ಬೆಲ್ಲ ಬೀರಿ, ಒಳ್ಳೆ ಸಿನೆಮಾ ನೋಡಿ..I am sure you will not be disappointed …