ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ (84 ) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ

ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕವಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ (84 ) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಅವರು ಕಳೆದ ಮೂರ್ನಾಲ್ಕು ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಪತಿ, ಕವಿ ಪೂರ್ಣಚಂದ್ರ ತೇಜಸ್ವಿ ನಿಧನ ಬಳಿಕ ಚಿಕ್ಕಮಗಳೂರು ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನ ತೋಟದ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಅವರ ನೆಚ್ಚಿನ ಹವ್ಯಾಸಗಳ ಜೊತೆ ಕಾಫಿ ತೋಟವನ್ನು ಸಹ ನೋಡಿಕೊಂಡು ಹೋಗುತ್ತಿದ್ದರು. ಆದರೆ ಕಳೆದ ಕೆಲ ದಿನದ ಹಿಂದೆ ಬೆಂಗಳೂರಿನ ಮಗಳ ಮನೆಗೆ ಬಂದಿದ್ದರು ಎನ್ನಲಾಗಿದೆ. ಕಾಡಿನ‌ಸಂತ, ಕನ್ನಡ ಸಾಹಿತ್ಯ ಲೋಕದ ಮೇರು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿದ್ದ ರಾಜೇಶ್ವರಿ ಅವರು ಸಹ ಸಾಹಿತ್ಯ ಲೋಕದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಅಲ್ಲದೇ ತನ್ನ ಪತಿಯ ಬಗ್ಗೆ ನನ್ನ ತೇಜಸ್ವಿ ಎಂಬ ಪುಸ್ತಕವನ್ನು ಸಹ ಬರೆದು ಪ್ರಖ್ಯಾತಿಗಳಿಸಿದ್ದರು.

ರಾಜೇಶ್ವರಿ ಅವರ ಬದುಕಿನ ಹಾದಿ : ರಾಜೇಶ್ವರಿ ತೇಜಸ್ವಿ- 1937 ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯ ಹೊಸ ಬಡಾವಣೆಯಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. ಹೆಣ್ಣುಮಕ್ಕಳಿಗೂ ತಮ್ಮ ಕಾಲ ಮೇಲೆ ನಿಂತುಕೊಳ್ಳುವ ಹಾಗೆ ವಿದ್ಯಾಭ್ಯಾಸ ಕೊಡಬೇಕೆನ್ನುವ ತಮ್ಮ ತಂದೆಯ ಉದಾತ್ತ ಧ್ಯೇಯದಿಂದಾಗಿ ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂ.ಎ ಮಾಡಲು ಮಾನಸ ಗಂಗೋತ್ರಿ ಕಾಲೇಜು ಮೈಸೂರಿಗೆ ಬಂದು, ಅಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಪರಿಚಯವಾಗಿ ಪ್ರೀತಿಸಿದರು. ಆನಂತರ ಇವರ ಬದುಕಿನ ದಿಕ್ಕು ಬದಲಾಗಿತ್ತು. 1966ರಲ್ಲಿ ತೇಜಸ್ವಿ ಅವರನ್ನು ವಿವಾಹವಾಗಿ ರಾಷ್ಟ್ರಕವಿ ಮನೆಯ ಸೊಸೆಯಾಗಿ ಬಂದರು. ‘ನನ್ನ ತೇಜಸ್ವಿ’ ರಾಜೇಶ್ವರಿ ಅವರ ಮೊಟ್ಟ ಮೊದಲ ಪುಸ್ತಕವಾಗಿದೆ. ನಮ್ಮ ಮನೆಗೂ ಬಂದರು ಗಾಂಧೀಜಿ’ ಇವರ ಎರಡನೆಯ ಪುಸ್ತಕವಾಗಿದೆ. ರಾಜೇಶ್ವರಿ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಇಬ್ಬರೂ ಸಾಫ್ಟ್ ವೇರ್ ಇಂಜಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಈ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top