ರಾಮಾನುಜಾಚಾರ್ಯರು ಕಟ್ಟಿಸಿದ “ತಿರುಮಲ ಸಾಗರ”

ಕರ್ನಾಟಕವನ್ನು ಪುಣ್ಯಭೂಮಿಯೆಂದು ಸುಮ್ಮನೇ ಕರೆದದ್ದಲ್ಲ. ಅನೇಕ ಸಂಸ್ಥಾನಗಳು ಅನೇಕ ದೇವಾಲಯಗಳನ್ನು ಕಟ್ಟಿಸಿದ್ದರು. ಅನೇಕ ಯತಿಗಳು, ಜ್ಞಾನಿಗಳು ಈ ಪುಣ್ಯಭೂಮಿಯಲ್ಲಿ ಬದುಕಿದ್ದರು. ಅದರಲ್ಲಿಯೂ ಆಚಾರ್ಯತ್ರಯರೆಂದೇ ಕರೆಯಲ್ಪಡುವ ಶಂಕರ, ರಾಮಾನುಜ ಮತ್ತು ಮಧ್ವಾಚಾರ್ಯರಿಗೂ ಕರ್ನಾಟಕಕ್ಕೂ ವಿಶೇಷ ನಂಟಿದೆ. ವಿಶೇಷವೆಂದರೆ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಎಂಬ ವಿವಿಧ ಸಿದ್ಧಾಂತಗಳನ್ನು ಪ್ರತಿಪಾದಿಸಿದ ಮೂವರೂ ಆಚಾರ್ಯರೂ ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡದ್ದು ಕರ್ನಾಟಕವನ್ನೇ. ಶಂಕರಾಚಾರ್ಯರ ಕರ್ಮಭೂಮಿ ಮಲೆನಾಡಾದರೆ, ಮಧ್ವಾಚಾರ್ಯರದ್ದು ಕರಾವಳಿಯ ಉಡುಪಿ. ಇನ್ನು ರಾಮಾನುಜಾಚಾರ್ಯರ ಕರ್ಮಭೂಮಿ ಹಳೆ ಮೈಸೂರು ಪ್ರಾಂತ್ಯ. ಶಂಕರಾಚಾರ್ಯರು ಶೃಂಗೇರಿಯನ್ನು ಶಾರದಾಂಬೆಗೆ ಸೇವೆಗೈದರೆ, ಮಧ್ವಾಚಾರ್ಯರು ಉಡುಪಿಯಲ್ಲಿ ಕೃಷ್ಣನ ಸೇವೆ ಮಾಡಿದರು. ತಮಿಳುನಾಡಿನವರಾದರೂ ಕರ್ನಾಟಕಕ್ಕೆ ಬಂದ ರಾಮಾನುಜಾಚಾರ್ಯರು ಮೇಲುಕೋಟೆ ಎಂಬ ಇಡೀ ಪ್ರದೇಶವನ್ನೇ ಪುಣ್ಯಭೂಮಿಯಾಗಿ ಮಾರ್ಪಡಿಸಿದರು. ರಾಮಾನುಜಾಚಾರ್ಯರು ಎಂದರೆ ನಮಗೆ ಮೊದಲು ನೆನಪಿಗೆ ಬರುವುದು ಮೇಲುಕೋಟೆಯಲ್ಲಿ ಅವರು ಸ್ಥಾಪಿಸಿದ ಚೆಲುವನಾರಾಯಣ ಸ್ವಾಮಿ. ಈ ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ಬಗ್ಗೆ ಮತ್ತೊಂದು ಸಂಚಿಕೆಯಲ್ಲಿ ಬರೆಯುತ್ತೇನೆ. ಪ್ರಸ್ತುತ ಈ ಸಂಚಿಕೆಯಲ್ಲಿ ರಾಮಾನುಜಾಚಾರ್ಯರು ಸ್ಥಾಪಿಸಿದ ಕೆರೆಯೊಂದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.


ಮೈಸೂರಿನಿಂದ ಸುಮಾರು ೪೦ ಕಿ.ಮೀ ದೂರದಲ್ಲಿರುವ ತೊಂಡನೂರು ಎಂಬ ಗ್ರಾಮವೇ ಆ ಪುಣ್ಯಕ್ಷೇತ್ರ. ಅಲ್ಲಿ ತೊಂಡೆ ರಾಕ್ಷಸಿ ಎಂಬ ರಾಕ್ಷಸಿಯಿದ್ದಳಂತೆ. ತಮಿಳಿನಲ್ಲಿ ತೊಂಡೆ ಎಂದರೆ ಗಂಟಲು (ಕಂಠ) ಎಂದು ಅರ್ಥ. ಆ ರಾಕ್ಷಸಿಯ ಕಂಠ ದೊಡ್ಡದಾಗಿಯೂ, ಕರ್ಕಶವಾಗಿಯೂ ಇದ್ದುದ್ದರಿಂದ ತೊಂಡನೂರು ಎಂಬ ಹೆಸರು ಬಂದಿದೆಯಂತೆ. ಶಾಪವೊಂದಕ್ಕೆ ಒಳಗಾಗಿದ್ದ ಆ ರಕ್ಕಸಿ ಪ್ರಜೆಗಳಿಗೆ ತುಂಬಾ ಉಪದ್ರವ ಕೊಡುತ್ತಿದ್ದಳಂತೆ. ಅವಳ ಶಾಪವನ್ನು ರಾಮಾನುಜಾಚಾರ್ಯರು ತಮ್ಮ ತಪಃ ಶಕ್ತಿಯಿಂದ ಪರಿಹರಿಸಿದರು ಎಂಬುದು ಪ್ರಚಲಿತ ಸ್ಥಳೀಯ ಕತೆಗಳಿಂದ ತಿಳಿದುಬರುತ್ತದೆ. ಆನಂತರ ಅಲ್ಲಿನ ಸ್ಥಳೀಯರ ಬೇಡಿಕೆಯಂತೆ ರಾಮಾನುಜಾಚಾರ್ಯರು ಅಲ್ಲಿಯೇ ನೆಲೆಸಿ ನಂಬಿ ನಾರಾಯಣನನ್ನು ಪ್ರತಿಷ್ಠಾಪಿಸಿ, ನಿತ್ಯ ಪೂಜೆಯನ್ನು ನಡೆಸುತ್ತಿರುತ್ತಾರೆ. ಹೀಗಿರುವಾಗ ಅಲ್ಲಿನ ಜನರು ಕುಡಿಯುವ ನೀರಿಗಾಗಿ ಪರಿತಪಿಸುವುದನ್ನು ಕಂಡ ಆಚಾರ್ಯರು ಸಮೀಪದಲ್ಲಿ ನೀರಿನ ಮೂಲವನ್ನು ಹುಡುಕಲು ಶುರು ಮಾಡಿ, ಜಾಗವೊಂದನ್ನು ಗುರ್ತಿಸಿ, ಅಲ್ಲಿ ಬಾವಿಯೊಂದನ್ನು ತೋಡುವಂತೆ ಸ್ಥಳೀಯರಿಗೆ ಹೇಳುತ್ತಾರೆ. ಆಚಾರ್ಯರ ಅಣತಿಯಂತೆ ಅಲ್ಲಿ ಬಾವಿಯನ್ನು ತೋಡಲು, ಬಾವಿಯಿಂದ ನೀರು ಮೇಲೆ ಉಕ್ಕಲು ಪ್ರಾರಂಭಿಸುತ್ತದೆ. ಎಷ್ಟು ನೀರು ಉಕ್ಕುತ್ತದೆಂದರೆ ಆ ಬಾವಿಯಿಂದ ಹೊರಬಂದ ನೀರು ನೋಡ ನೋಡುತ್ತಲೇ ಒಂದು ದೊಡ್ಡ ಕೆರೆಯಷ್ಟಾಗುತ್ತದೆ. ಇನ್ನೂ ಬೆಳೆಯುತ್ತಾ ಒಂದು ನದಿಯಷ್ಟಾಗುತ್ತದೆ. ರಾಮಾನುಜಾಚಾರ್ಯರು ಆ ಕೆರೆಗೆ “ತಿರುಮಲ ಸಾಗರ”ವೆಂದೇ ನಾಮಕರಣ ಮಾಡುತ್ತಾರೆ. ರಾಮಾನುಜಾಚಾರ್ಯರಿಂದ ನಿರ್ಮಿಸಲ್ಪಟ್ಟಿದ್ದರಿಂದ ಈ ಕೆರೆಯ ನೀರು ಅನೇಕ ಪಾಪಗಳನ್ನು ಪರಿಹರಿಸುತ್ತದೆ ಎಂಬುದು ಇಂದಿಗೂ ಜನರ ನಂಬಿಕೆ. ಬಿಟ್ಟಿಗ ಅಥವಾ ಬಿಟ್ಟಿದೇವ ಅಥವಾ ವಿಷ್ಣುವರ್ಧನ ನೆಂಬ ರಾಜನ ಬಗ್ಗೆ ನಮಗೆಲ್ಲ ಗೊತ್ತೇ ಇದೆ ಅಲ್ಲವೇ? ಈ ರಾಜನ ಮೂಲ ಹೆಸರು ಬಿಟ್ಟಿಗ ಅಥವಾ ಬಿಟ್ಟಿದೇವ. ಅವನ ಮಗಳಿಗೆ ವಿಚಿತ್ರವಾದ ಕಾಯಿಲೆ ಬಂದು ಯಾವ ಪಂಡಿತರೂ ಗುಣಪಡಿಸಲಾರದ ಸ್ಥಿತಿಗೆ ತಲುಪುತ್ತದೆ. ಆಗ ಆಸ್ಥಾನ ಜ್ಯೋತಿಷಿಯರ ಸಲಹೆಯ ಮೇರೆಗೆ ತನ್ನ ಮಗಳನ್ನು ಕರೆದುಕೊಂಡು ಬಿಟ್ಟಿದೇವನು ರಾಮಾನುಜಾಚಾರ್ಯರ ಬಳಿಗೆ ಬರುತ್ತಾರೆ. ಆ ಹೆಣ್ಣುಮಗುವಿಗೆ ತಿರುಮಲ ಸಾಗರದ ನೀರಿನಲ್ಲಿ ಮಿಂದು, ದೇವರ ಸೇವೆ ಮಾಡುವಂತೆ ಆಚಾರ್ಯರು ಹೇಳುತ್ತಾರೆ. ಅದರಂತೆ ಆಕೆ ಮಾಡಲು, ಕಾಯಿಲೆ ಸಂಪೂರ್ಣ ವಾಸಿಯಾಗುತ್ತದೆ.

ಅಂದಿನಿಂದ ರಾಮಾನುಜಾಚಾರ್ಯರ ಶಿಷ್ಯರಾಗಿ ವೈಷ್ಣವ ಮಠಕ್ಕೆ ಮತಾಂತರಗೊಂಡು ತನ್ನ ಹೆಸರನ್ನು “ವಿಷ್ಣುವರ್ಧನ”ನೆಂದು ಬದಲಾಯಿಸಿಕೊಂಡನೆಂಬುದು ಇಲ್ಲಿನ ಇತಿಹಾಸ. ಈ ಕೆರೆಯ ಇನ್ನೊಂದು ವಿಶೇಷವೆಂದರೆ ಎಂತಹ ಬರಗಾಲವೇ ಬರಲಿ, ಈ ಕೆರೆಯ ನೀರು ಎಂದೂ ಬತ್ತುವುದೇ ಇಲ್ಲ. ಸ್ಥಳೀಯ ಕತೆಗಳ ಪ್ರಕಾರ, ಒಂದಷ್ಟು ಜನರು ಪಂಪ್ ಸೆಟ್ ಮೂಲಕ ಈ ನೀರನ್ನು ಹೊರತೆಗೆಯಲು ಪ್ರಯತ್ನಿಸಿದರಂತೆ. ಒಂದು ಹತ್ತು ಕೊಡ ನೀರು ಬರುವಷ್ಟರಲ್ಲಿಯೇ ಜೋಡಿಸಿದ್ದ ಅಷ್ಟೂ ಹೊಸ ಪಂಪ್ ಸೆಟ್ಟುಗಳೂ ಕೆಟ್ಟುಹೋದವಂತೆ. ಹಾಗಾಗಿ ಇದು ದೇವರ ವಿಚಿತ್ರ ಸೃಷ್ಟಿ ಎಂಬುದು ಇಲ್ಲಿನ ಜನರ ನಂಬಿಕೆ. ಈ ಕೆರೆಯ ನೀರು ಅನೇಕ ಪಾಪಗಳನ್ನು ಪರಿಹರಿಸಬಲ್ಲದು. ಈ ಬಾರಿ ಮೈಸೂರಿಗೆ ಬಂದಾಗ ತಪ್ಪದೆ ತೊಂಡನೂರು ಕೆರೆಯ ನೀರಿನಲ್ಲಿ ಮಿಂದು ನಂಬಿ ನಾರಾಯಣನ ದರ್ಶನ ಮಾಡಿ ಹೋಗಿ. ಪಾಂಡವಪುರದಿಂದ ಹತ್ತು , ಮೈಸೂರಿನಿಂದ ಸುಮಾರು ನಲ್ವತ್ತು ಕಿ.ಮೀ. ದೂರದಲ್ಲಿರುವ ತೊಂಡನೂರಿಗೆ ಉತ್ತಮ ರಸ್ತೆ ವ್ಯವಸ್ಥೆಯಿದೆ. ನಂಬಿನಾರಾಯಣ, ಮೇಲುಕೋಟೆ, ಗೋಪಾಲಸ್ವಾಮಿ, ವೆಂಕಟೇಶ್ವರ ಸೇರಿದಂತೆ ಅನೇಕ ದೇವಾಲಯಗಳು ಸನಿಹದಲ್ಲೇ ಇರುವುದರಿಂದ ಸ್ವಂತ ವಾಹನದಲ್ಲಿ ಬರುವುದು ಒಳಿತು.

Leave a Comment

Your email address will not be published. Required fields are marked *

Translate »
Scroll to Top