ಪ್ರವಾಸಿ ತಾಣಗಲ್ಲಿ ಪ್ರವಾಸಿಗರು ಸ್ವಚ್ಛತೆಯನ್ನು ಕಾಪಾಡಬೇಕು

ಚಿಕ್ಕಬಳ್ಳಾಪುರ:  ವಿಶ್ವವಿಖ್ಯಾತ ನಂದಿಗಿರಿಧಾಮ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಆ ತಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಮೊದಲ ಆದ್ಯತೆ ನೀಡಬೇಕು, ಪ್ಲಾಸ್ಟಿಕ್ ಬಾಟಲ್, ಕೈಚೀಲ ಸೇರಿದಂತೆ ತ್ಯಾಜ್ಯವನ್ನು ಮನಸೋ ಇಚ್ಚೆ ಎಲ್ಲೆಂದರಲ್ಲಿ ಬಿಸಾಡುವ ಮೂಲಕ  ಪರಿಸರ ಮಾಲಿನ್ಯಕ್ಕೆ ಅವಕಾಶ ನೀಡಬಾರದು ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಮನವಿ ಮಾಡಿದ್ದಾರೆ. ಅವರು ಇಂದು ಕಾರ್ಮಿಕ ದಿನದ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಸುಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮದಲ್ಲಿ ಜಿಲ್ಲಾಡಳಿತ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಂದಿಗಿರಿಧಾಮ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರವಾಸಿ ತಾಣಗಳಲ್ಲಿ ಇತ್ತೀಚಿಗೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಕೆಲ  ಪ್ರವಾಸಿಗರು, ಪ್ಲಾಸ್ಟಿಕ್ ಬಾಟಲ್, ಕೈಚೀಲ ಮತ್ತಿತರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರೂ ಮುಂದಾಗಬೇಕು. ಆ ಮೂಲಕ ಜವಾಬ್ದಾರಿಯನ್ನು ನಿರ್ವಹಿಸಬೇಕು. ತ್ಯಾಜ್ಯವನ್ನು ಕಡ್ಡಾಯವಾಗಿ  ನಿಗದಿತ ಕಸ ಬುಟ್ಟಿಗಳಲ್ಲೇ  ಹಾಕಬೇಕು.ಒಂದು ವೇಳೆ ಕಸದ ಬುಟ್ಟಿಗಳು ಲಭ್ಯವಿಲ್ಲದೇ ಇದ್ದಲ್ಲಿ ಆ ಪ್ಲಾಸ್ಟಿಕ್ ತ್ಯಾಜ್ಯವನ್ನು ಮನೆಗೆ ತೆಗೆದುಕೊಂಡು ಹೋಗಿ ಕಸದ ಬುಟ್ಟಿಗೆ ಹಾಕಬೇಕು. ಇದು ಪ್ರತಿಯೊಬ್ಬರ ಕರ್ತವ್ಯವೂ ಹೌದು. ನಿಯಮಗಳನ್ನು ಪಾಲನೆ ‌ಮಾಡಿದಲ್ಲಿ ಪ್ರವಾಸಿತಾಣಗಳಲ್ಲಿ ಸಸ್ಯ ಮತ್ತು ಜೀವ ವೈವಿಧ್ಯತೆಗೆ ಧಕ್ಕೆಯಾಗುವುದಿಲ್ಲ ಎಂದರು.  ಜಿಲ್ಲಾಧಿಕಾರಿ ಆರ್.ಲತಾ ಮತ್ತಿತರ ಅಧಿಕಾರಿಗಳು ಹಾಜರಿದ್ದರು. ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸ್ವಯಂಸೇವಕರು, ಸಾರ್ವಜನಿಕರು, ಸರ್ಕಾರಿ ನೌಕರರು ನಂದಿಗಿರಿಧಾಮದಲ್ಲಿ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯ ವಿಲೇವಾರಿ ಮಾಡಿದರು.

Leave a Comment

Your email address will not be published. Required fields are marked *

Translate »
Scroll to Top