ಟೊರೊಂಟೊ: ಭಾರತವು ಜಗತ್ತನ್ನು ಆಕ್ರಮಿಸಲು ಎಂದಿಗೂ ಮುಂದಾಗಿಲ್ಲ; ಬದಲಿಗೆ ಜ್ಞಾನ, ಸಂಸ್ಕೃತಿ ಹಾಗೂ ಮಾನವೀಯತೆಯನ್ನು ವಿಶ್ವಕ್ಕೆ ಹಂಚಿದ ಪರಂಪರೆಯನ್ನು ಹೊಂದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಕೆನಡಾದ ಟೊರೊಂಟೊದಲ್ಲಿ ‘ಕೆನಡಿಯನ್ ಹಿಂದೂಸ್ ಫಾರ್ ಔಟ್ರೀಚ್, ರಿಲೇಶನ್ಸ್ ಅಂಡ್ ಡೈಲಾಗ್’ ಆಯೋಜಿಸಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, “ಹಿಂದೂ ಧರ್ಮವು ಜಗತ್ತನ್ನು ಒಂದುಗೂಡಿಸುವ ಶಕ್ತಿಯೇ ಹೊರತು ಸಮಾಜವನ್ನು ವಿಭಜಿಸುವ ಶಕ್ತಿಯಲ್ಲ. ಇತರರಿಗೆ ನೆರವಾಗುವುದು ಹಾಗೂ ಇಡೀ ಜಗತ್ತನ್ನು ಒಂದು ಕುಟುಂಬವಾಗಿ ಕಾಣುವುದು ಭಾರತೀಯ ಪರಂಪರೆಯ ಡಿಎನ್‌ಎಯಲ್ಲೇ ಬೇರೂರಿದೆ” ಎಂದು ಹೇಳಿದರು.
‘ಹಿಂದೂ’ ಎಂಬ ಪರಿಕಲ್ಪನೆಯನ್ನು ನಿರ್ದಿಷ್ಟ ಭಾಷೆ, ಪೂಜಾ ಪದ್ಧತಿ ಅಥವಾ ಜೀವನಶೈತಿಯ ಸೀಮಿತ ಚೌಕಟ್ಟಿನಲ್ಲಿ ನೋಡಲು ಸಾಧ್ಯವಿಲ್ಲ. ಹಿಂದೂ ತತ್ವಜ್ಞಾನವು ವೈವಿಧ್ಯತೆಯನ್ನು ಗೌರವಿಸುವುದರ ಜೊತೆಗೆ ಪ್ರತಿಯೊಂದು ಭಿನ್ನತೆಯನ್ನೂ ಸ್ವೀಕರಿಸುತ್ತದೆ ಎಂದು ಭಾಗವತ್ ಪ್ರತಿಪಾದಿಸಿದರು.
ಭಾರತೀಯ ಸಮಾಜದಲ್ಲಿ ನೂರಾರು ಭಾಷೆಗಳು, ಜಾತಿಗಳು ಮತ್ತು ಧರ್ಮಗಳಿರುವುದು ಸಹಜ. ಆದರೆ ಈ ಎಲ್ಲ ವೈವಿಧ್ಯತೆಯ ಹಿಂದಿರುವ ಆಂತರಿಕ ಏಕತೆಯೇ ಭಾರತದ ಶಕ್ತಿ ಹಾಗೂ ಅಂತಿಮ ಸತ್ಯವಾಗಿದೆ ಎಂದರು.
ಭಾರತದ ಪೂರ್ವಜರು ಮೆಕ್ಸಿಕೋದಿಂದ ಸೈಬೀರಿಯಾವರೆಗೆ, ಹಿಮಾಲಯದಿಂದ ಆಗ್ನೇಯ ಏಷ್ಯಾದವರೆಗೆ ಸಂಚರಿಸಿದ್ದರೂ ಯಾವುದೇ ಭೂಪ್ರದೇಶವನ್ನು ವಶಪಡಿಸಿಕೊಳ್ಳುವ ಉದ್ದೇಶ ಹೊಂದಿರಲಿಲ್ಲ. ಬದಲಿಗೆ ಆಯುರ್ವೇದ, ಖಗೋಳಶಾಸ್ತ್ರ ಸೇರಿದಂತೆ ಜ್ಞಾನ ಮತ್ತು ನಾಗರಿಕತೆಯ ಕೊಡುಗೆಗಳನ್ನು ವಿಶ್ವದ ವಿವಿಧ ಭಾಗಗಳಿಗೆ ನೀಡಿದರು ಎಂದು ಅವರು ಹೇಳಿದರು.
ಭಾರತದ ಮಾನವೀಯ ಪರಂಪರೆಯನ್ನು ವಿವರಿಸಿದ ಭಾಗವತ್, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪೋಲಿಷ್ ನಿರಾಶ್ರಿತರಿಗೆ ಜಾಮ್‌ನಗರದ ಮಹಾರಾಜರು ಆಶ್ರಯ ನೀಡಿದ್ದ ಘಟನೆಯನ್ನು ಸ್ಮರಿಸಿದರು. ಪಾರ್ಸಿಗಳು, ಯಹೂದಿಗಳು, ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರಿಗೆ ಭಾರತ ಸುರಕ್ಷಿತ ನೆಲೆಯಾಗಿ ಆಶ್ರಯ ನೀಡಿದೆ ಎಂದು ಹೇಳಿದರು.
ವಿಶ್ವದ ಯಾವುದೇ ಭಾಗದಲ್ಲಿ ಬಿಕ್ಕಟ್ಟು ಎದುರಾದಾಗಲೂ ಭಾರತ ತನ್ನ ನೆರವಿನ ಹಸ್ತವನ್ನು ಚಾಚುತ್ತದೆ. ಇತ್ತೀಚಿನ ಯುದ್ಧಪೀಡಿತ ಪ್ರದೇಶಗಳಿಂದ ಭಾರತೀಯರೊಂದಿಗೆ ಏಳುಕ್ಕೂ ಹೆಚ್ಚು ದೇಶಗಳ ವಿದೇಶಿ ಪ್ರಜೆಗಳನ್ನೂ ರಕ್ಷಿಸಿರುವುದು ಭಾರತದ ಮಾನವೀಯ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ ಎಂದು ಭಾಗವತ್ ಹೇಳಿದರು.
ಮುಕ್ತ ಮನಸ್ಸಿನ ಹಾಗೂ ಸಮಗ್ರ ಸಮಾಜ ನಿರ್ಮಾಣಕ್ಕೆ ‘ವಸುಧೈವ ಕುಟುಂಬಕಂ’ ಪರಿಕಲ್ಪನೆ ಅತ್ಯಂತ ಅಗತ್ಯ. ಹಿಂದೂ ಸಮಾಜ ಜಾಗೃತಗೊಂಡರೆ ಅದರ ಪರಿಣಾಮ ಇಡೀ ಜಗತ್ತಿನ ಮೇಲೂ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕೆನಡಾದ ಎಂಟು ಪ್ರಾಂತ್ಯಗಳಿಂದ 2,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದ ಈ ಬೃಹತ್ ಸಮಾವೇಶದಲ್ಲಿ ಕೆನಡಾದ ಮಾಜಿ ರಕ್ಷಣಾ ಸಚಿವ ಹಾಗೂ ಆಲ್ಬರ್ಟಾದ ಮಾಜಿ ಪ್ರೀಮಿಯರ್ ಜೇಸನ್ ಕೆನ್ನಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಗಣ್ಯರು ಉಪಸ್ಥಿತರಿದ್ದರು.