ಮುಲ್ಲನ್ ಪುರ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಸಿಕ್ಸರ್‌ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಅಬ್ಬರಿಸಿದ 15 ವರ್ಷದ ಈ ಯುವ ಆಟಗಾರ, ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಅವರ 14 ವರ್ಷಗಳ ಹಳೆಯ ಐತಿಹಾಸಿಕ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.
ನ್ಯೂ ಚಂಡೀಗಢದ ಮುಲ್ಲನ್ ಪುರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಮೊದಲು ಬ್ಯಾಟಿಂಗ್ ಮಾಡಲು ಬಂದ ರಾಜಸ್ತಾನ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ಒದಗಿಸಿದರು. ಯಶಸ್ವಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಸೂರ್ಯವಂಶಿ ಮೊದಲ ವಿಕೆಟ್‌ಗೆ ಬರೋಬ್ಬರಿ 125 ರನ್‌ಗಳ ದಾಖಲೆಯ ಜೊತೆಯಾಟವಾಡಿದರು. ಕೇವಲ 29 ಎಸೆತಗಳನ್ನು ಎದುರಿಸಿದ ವೈಭವ್, 12 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 97 ರನ್ ಚಚ್ಚಿದರು. ಶತಕದ ಅಂಚಿನಲ್ಲಿ ಪvariance್ರಫುಲ್ ಹಿಂಗೆ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಸ್ಮರಣ್ ರವಿಚಂದ್ರನ್‌ಗೆ ಕ್ಯಾಚ್ ನೀಡಿ ಔಟಾದರು.
ಕ್ರಿಸ್ ಗೇಯ್ಲ್ ಸಿಕ್ಸರ್ ಸಾಮ್ರಾಜ್ಯ ಪತನ!
ಐಪಿಎಲ್ 2026ರಲ್ಲಿ ವೃತ್ತಿಜೀವನದ ಶ್ರೇಷ್ಠ ಫಾರ್ಮ್‌ನಲ್ಲಿರುವ ವೈಭವ್ ಸೂರ್ಯವಂಶಿ ನಿರಂತರವಾಗಿ ದಾಖಲೆಗಳನ್ನು ಬರೆಯುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಸಾಕಿಬ್ ಹುಸೇನ್ ಅವರ ಬೌಲಿಂಗ್‌ನಲ್ಲಿ ಲಾಂಗ್-ಆಫ್ ಮೇಲೆ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ, ಒಂದು ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ್ದ ಕ್ರಿಸ್ ಗೇಯ್ಲ್ ಅವರ ದಾಖಲೆಯನ್ನು ಮೀರಿ ನಿಂತರು. ಗೇಯ್ಲ್ 2012ರ ಸೀಸನ್‌ನಲ್ಲಿ 59 ಸಿಕ್ಸರ್ ಬಾರಿಸಿದ್ದರು. ಇದೀಗ ವೈಭವ್ ಈ ಸೀಸನ್‌ನಲ್ಲಿ ತಮ್ಮ ಸಿಕ್ಸರ್‌ಗಳ ಸಂಖ್ಯೆಯನ್ನು 65ಕ್ಕೆ ಹೆಚ್ಚಿಸಿಕೊಂಡಿದ್ದಾರೆ.
ಒಂದು ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರು:
ವೈಭವ್ ಸೂರ್ಯವಂಶಿ (2026): 65 ಸಿಕ್ಸರ್
ಕ್ರಿಸ್ ಗೇಯ್ಲ್ (2012): 59 ಸಿಕ್ಸರ್
ಆಂಡ್ರೆ ರಸೆಲ್ (2019): 52 ಸಿಕ್ಸರ್
ಕ್ರಿಸ್ ಗೇಯ್ಲ್ (2013): 51 ಸಿಕ್ಸರ್
ಜೋಸ್ ಬಟ್ಲರ್ (2022): 45 ಸಿಕ್ಸರ್
ಪ್ಲೇಆಫ್‌ನಲ್ಲಿ ವೇಗದ ಅರ್ಧಶತಕ: ಸುರೇಶ್ ರೈನಾ ದಾಖಲೆ ಸರಿಗಟ್ಟಿದ ಯುವ ಸಾಮ್ರಾಟ್ 
ಕೇವಲ ಸಿಕ್ಸರ್ ದಾಖಲೆ ಮಾತ್ರವಲ್ಲದೆ, ಐಪಿಎಲ್ ನಾಕೌಟ್/ಪ್ಲೇಆಫ್ ಇತಿಹಾಸದಲ್ಲೇ ಜಂಟಿ ವೇಗದ ಅರ್ಧಶತಕ ಸಿಡಿಸಿದ ಹೆಗ್ಗಳಿಕೆಗೂ ವೈಭವ್ ಪಾತ್ರರಾಗಿದ್ದಾರೆ. ಕೇವಲ 16 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಸೂರ್ಯವಂಶಿ, 2014ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಭಾರತದ ಮಾಜಿ ಆಟಗಾರ ಸುರೇಶ್ ರೈನಾ ಅವರ ದಾಖಲೆಯನ್ನು ಸರಿಗಟ್ಟಿದರು. ಅಲ್ಲದೆ 17 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಆಸ್ಟ್ರೇಲಿಯಾದ ದಂತಕಥೆ ಆ್ಯಡಂ ಗಿಲ್‌ಕ್ರಿಸ್ಟ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಐಪಿಎಲ್ ಪ್ಲೇಆಫ್‌ನಲ್ಲಿ ಅತಿ ವೇಗದ ಅರ್ಧಶತಕಗಳು (ಎಸೆತಗಳ ಆಧಾರದಲ್ಲಿ):
16 ಎಸೆತ: ಸುರೇಶ್ ರೈನಾ (vs PBKS, ವಾಂಖೆಡೆ, 2014)
16 ಎಸೆತ: ವೈಭವ್ ಸೂರ್ಯವಂಶಿ (vs SRH, ಮುಲ್ಲನ್‌ಪುರ್, 2026)*
17 ಎಸೆತ: ಆ್ಯಡಂ ಗಿಲ್‌ಕ್ರಿಸ್ಟ್ (vs DC, ಸೆಂಚೂರಿಯನ್, 2009)
20 ಎಸೆತ: ಎಂ.ಎಸ್. ಧೋನಿ (vs MI, ಬೆಂಗಳೂರು, 2012)
21 ಎಸೆತ: ಡ್ವೇನ್ ಸ್ಮಿತ್ (vs CSK, ದೆಹಲಿ, 2013)
ರಿಷಬ್ ಪಂತ್ ಅವರ ಮತ್ತೊಂದು ದಾಖಲೆ ಬ್ರೇಕ್
ಇದೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಐಪಿಎಲ್ ಸೀಸನ್ ಒಂದರಲ್ಲಿ 600 ರನ್ ಪೂರೈಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಐತಿಹಾಸಿಕ ಕೀರ್ತಿಗೂ ಭಾಜನರಾಗಿದ್ದಾರೆ. ಈ ಹಿಂದೆ ಈ ದಾಖಲೆ ರಿಷಬ್ ಪಂತ್ ಹೆಸರಿನಲ್ಲಿತ್ತು. ಪಂತ್ 2018ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಪರ ಆಡುವಾಗ ಈ ಸಾಧನೆ ಮಾಡಿದ್ದರು. ಸದ್ಯ 15 ವರ್ಷದ ಈ ವಂಡರ್ ಕಿಡ್ ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ.