ಬೆಂಗಳೂರು: ನೈಋತ್ಯ ಮಾನ್ಸೂನ್ ಆರಂಭವಾದ ಬಳಿಕದ ಮೊದಲ ತಿಂಗಳಲ್ಲೇ ಕರ್ನಾಟಕದಲ್ಲಿ ಶೇ.41ರಷ್ಟು ಮಳೆ ಕೊರತೆ ದಾಖಲಾಗಿದ್ದು, ರಾಜ್ಯದಲ್ಲಿ ಬರಗಾಲದ ಆತಂಕ ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹಾಗೂ ಹವಾಮಾನ ತಜ್ಞರು ಈ ಅವಧಿಯನ್ನು ದುರ್ಬಲ ಅಥವಾ ವಿಫಲ ಮಾನ್ಸೂನ್ ಎಂದು ವಿಶ್ಲೇಷಿಸಿದ್ದು, ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಐಎಂಡಿ ಅಂಕಿ-ಅAಶಗಳ ಪ್ರಕಾರ, ಜೂನ್ ತಿಂಗಳಲ್ಲಿ ಸಾಮಾನ್ಯವಾಗಿ 162.5 ಮಿ.ಮೀ. ಮಳೆ ಸುರಿಯಬೇಕಿದ್ದರೆ, ಈ ಬಾರಿ ಕೇವಲ 95.2 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ. ಬೆಂಗಳೂರಿನಲ್ಲೂ ಸಾಮಾನ್ಯ 89 ಮಿ.ಮೀ. ಮಳೆಯ ಬದಲು ಜೂನ್ 25ರವರೆಗೆ 66 ಮಿ.ಮೀ. ಮಳೆಯಷ್ಟೇ ಸುರಿದಿದೆ.
ಹವಾಮಾನ ತಜ್ಞರ ಪ್ರಕಾರ, ಈ ವರ್ಷದ ದುರ್ಬಲ ಮಾನ್ಸೂನ್‌ಗೆ ಎಲ್ ನಿನೊ ಪರಿಣಾಮ ಪ್ರಮುಖ ಕಾರಣವಾಗಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಅಗತ್ಯ ಪ್ರಮಾಣದ ವಾಯುಭಾರ ಕುಸಿತ ಹಾಗೂ ಹವಾಮಾನ ವ್ಯವಸ್ಥೆಗಳು ರೂಪುಗೊಳ್ಳದಿರುವುದು ಮಳೆಯ ಪ್ರಮಾಣ ಕುಸಿಯಲು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಹಲವೆಡೆ ಮಳೆ ಕೊರತೆಯ ಜೊತೆಗೆ ತಾಪಮಾನವೂ ಏರಿಕೆಯಾಗುತ್ತಿದೆ. ಕಲಬುರಗಿಯಲ್ಲಿ ಇತ್ತೀಚೆಗೆ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ಕರಾವಳಿ ಕರ್ನಾಟಕದಲ್ಲಿ ಶೇ.50 ಹಾಗೂ ಬೆಂಗಳೂರಿನಲ್ಲಿ ಶೇ.25ರಷ್ಟು ಮಳೆ ಕೊರತೆ ಕಂಡುಬAದಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ ಮಾಜಿ ನಿರ್ದೇಶಕ ಜಿ.ಎಸ್. ಶ್ರೀನಿವಾಸ್ ರೆಡ್ಡಿ, 2023ರಲ್ಲೂ ರಾಜ್ಯ ತೀವ್ರ ಮಳೆ ಕೊರತೆಯನ್ನು ಎದುರಿಸಿತ್ತು. ಅದರ ಪರಿಣಾಮಗಳು 2024ರವರೆಗೂ ಮುಂದುವರಿದಿದ್ದವು
ಎಂದು ನೆನಪಿಸಿ, ದೀರ್ಘಾವಧಿಯ ಬರ ನಿರ್ವಹಣಾ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಐಐಎಸ್‌ಸಿ ದಿವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್‌ನ ವಿಜ್ಞಾನಿ ಪ್ರೊ. ಜೆ. ಶ್ರೀನಿವಾಸನ್ ಅವರ ಪ್ರಕಾರ, ಎಲ್ ನಿನೊ ಜೊತೆಗೆ ಜಾಗತಿಕ ತಾಪಮಾನ ಏರಿಕೆಯೂ ಮಾನ್ಸೂನ್ ದುರ್ಬಲವಾಗಲು ಕಾರಣವಾಗಿರಬಹುದು. ನಿಖರ ಕಾರಣ ತಿಳಿಯಲು ಇನ್ನಷ್ಟು ವೈಜ್ಞಾನಿಕ ಅಧ್ಯಯನ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ, ಸೂಪರ್ ಎಲ್ ನಿನೊ ಪರಿಣಾಮದಿಂದ ರಾಜ್ಯದಲ್ಲಿ ಉಂಟಾಗಬಹುದಾದ ಬರಗಾಲದಂತಹ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಕಂದಾಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮಳೆ ಕೊರತೆಯಿಂದ ಕೃಷಿ, ಕುಡಿಯುವ ನೀರು ಹಾಗೂ ಜಲಾಶಯಗಳ ನೀರಿನ ಸಂಗ್ರಹದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಸಂಬAಧಿತ ಇಲಾಖೆಗಳು ಮುಂಚಿತ ಸಿದ್ಧತೆ ಕೈಗೊಳ್ಳುವ ಅಗತ್ಯ ಹೆಚ್ಚಾಗಿದೆ.