ಬಳ್ಳಾರಿ: ಜಿ-ಸ್ಕ್ವಾಯರ್ ಲೇಔಟ್‍ನಲ್ಲಿನ `ಮಾಡೆಲ್ ಹೌಸ್’ಗೆ ಬೆಂಕಿ ಹಚ್ಚುವ ಮೂಲಕ ಭಯ ಸೃಷ್ಟಿಸುವ ಪ್ರಯತ್ನ ನಡೆದಿದೆ. ಬಾಲಕರು ರೀಲ್ಸ್ ಮಾಡುವಾಗ ಬೆಂಕಿ ಹೊತ್ತಿಕೊಂಡಿರುವುದು ಆಕಸ್ಮಿಕ ಎಂದು ಎಸ್.ಪಿ.ಡಾ||ಸುಮನ್ ಡಿ.ಪೆನ್ನೇಕರ್ ಅವರ ಹೇಳಿಕೆ ಒಪ್ಪುವಂತಹುದ್ದಲ್ಲ. ಎಸ್ಪಿಯವರು ಕೆಳ ಹಂತದ ಅಧಿಕಾರಿಗಳ ಮಾತು ಕೇಳಿ ಆ ರೀತಿ ಹೇಳುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ತಿಳಿಸಿದ್ದಾರೆ.
ತಮ್ಮ ನಿವಾಸದ `ಗ್ಲಾಸ್‍ಹೌಸ್’ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೆಂಕಿ ಪ್ರಕರಣ ಆಕಸ್ಮಿಕವಲ್ಲ. ಉದ್ದೇಶಪೂರ್ವಕವಾಗಿ ಮಾಡಲಾಗಿದೆ. ಆರು ಅಪ್ರಾಪ್ತ ಬಾಲಕರು ಹಾಗೂ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿರುವುದು ನಾವು ನೀಡಿದ ವಿಡಿಯೋ ಆಧಾರದಿಂದ! ಆದರೆ ಇನ್ನೂ ಆರು ಜನರು ತಪ್ಪಿಸಿಕೊಂಡಿದ್ದಾರೆ. ಎರಡು ಬೈಕ್‍ಗಳಲ್ಲಿ ಪರಾರಿಯಾಗಿದ್ದಾರೆ. ಪೊಲೀಸರು ಅವರ ಬಗ್ಗೆ ಮಾತನಾಡುತ್ತಿಲ್ಲ ಎಂದರು.
ಬಹಳ ವರ್ಷಗಳಿಂದ ಮನೆಯು ಪಾಳು ಬಿದ್ದಿತ್ತು ಎಂದು ಎಸ್ಪಿಯವರು ಹೇಳಿರುವುದೂ ಸಮಂಜಸವಲ್ಲ. 2023ರವರೆಗೂ ಜಿ-ಸ್ಕ್ವಾಯರ್ ಲೇ-ಔಟ್‍ನ ಮೇಲುಸ್ತುವಾರಿ ಇದೆ. ಅಲ್ಲಿ ಖಾಸಗೀ ಭದ್ರತಾ ಸಿಬ್ಬಂದಿಯೂ (ಸೆಕ್ಯೂರಿಟಿ ಗಾರ್ಡ್‍ಗಳು) ಇದ್ದಾರೆ. ಮನೆಯೊಳಗಡೆ ಬೆಂಕಿ ಹಚ್ಚಿರುವುದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಪೆಟ್ರೋಲ್ –ಡೀಜಲ್ ತಂದು ಬೆಂಕಿ ಹಚ್ಚಲಾಗಿದೆ. `ರೀಲ್ಸ್’ ಎಂದು ಪೊಲೀಸರು ನೀಡುತ್ತಿರುವ ಹೇಳಿಕೆ ಹಾಸ್ಯಾಸ್ಪದ ಎಂದು ರೆಡ್ಡಿ ಟೀಕಿಸಿದರು.
ಎಸ್‍ಪಿಯವರು ಬಹಳ ಒಳ್ಳೆಯ ಅಧಿಕಾರಿ. ಆದರೆ, ಕೆಳ ಹಂತದ ಪೊಲೀಸ್ ಅಧಿಕಾರಿಗಳ ಮಾತು ಕೇಳದಿರಲಿ. ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲನೆ ನಡೆಸಲಿ. ಬಾಲಕರು, ಯುವಕರು ರೀಲ್ಸ್ ಮಾಡಿದ್ದೇ ನಿಜವಾದಲ್ಲಿ, ಆ ಬಗೆಗಿನ `ವಿಡಿಯೋ’ ತುಣುಕುಗಳನ್ನು (ವೀಡಿಯೋ) ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
ನಾಡಿದ್ದು ಮಂಗಳವಾರ ಜ.27ರಂದು ವಿಧಾನಸೌಧದಲ್ಲಿ ಈ ಬಗ್ಗೆ ನಾನೂ ಸೇರಿದಂತೆ ಬಿಜೆಪಿ ಶಾಸಕರು, ಧುರೀಣರು ಈ ಬಗ್ಗೆ ಪ್ರಸ್ತಾಪಿಸುತ್ತೇವೆ. ಜ.1ರ ಹಾಗೂ ಮೊನ್ನೆಯ ಬೆಂಕಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಹಕ್ಕೊತ್ತಾಯ ಮಂಡಿಸುತ್ತೇವೆ. ಸಿಬಿಐ ತನಿಖೆ ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೆಡ್ಡಿ ಸ್ಪಷ್ಟಪಡಿಸಿದರು.
ಜ.1ರ ಘಟನೆ ನಡೆದು 25 ದಿನಗಳಾದರೂ ಶಾಸಕ ಭರತ್‍ರೆಡ್ಡಿ ಹಾಗೂ ಸತೀಶ್‍ರೆಡ್ಡಿ ಅವರನ್ನು ಬಂಧಿಸಿಲ್ಲ. ಮೂವರು `ಗನ್‍ಮ್ಯಾನ್’ಗಳನ್ನು ಮಾತ್ರ ಬಂಧಿಸಲಾಗಿದೆ. ಸಿಐಡಿಯವರು ತನಿಖೆ ವಹಿಸಿಕೊಂಡರೂ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ನಾವು ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಮಾಜಿ ಸಂಸದ ಸಣ್ಣ ಫಕೀರಪ್ಪ, ಮಾಜಿ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಟಿ.ಹೆಚ್.ಸುರೇಶ್‍ಬಾಬು, ಮಾಜಿ ಮೇಯರ್ ಗುರ್ರಂ ವೆಂಕಟರಮಣ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ದಿವಾಕರ್, ಹಿರಿಯ ಧುರೀಣ ಡಾ||ಮಹಿಪಾಲ್, ಕಾರ್ಪೊರೇಟರ್ ಕೋನಂಕಿ ತಿಲಕ್, ವೆಂಕಟರಾಮಿರೆಡ್ಡಿ, ಮತ್ತಿತರರು ಉಪಸ್ಥಿತರಿದ್ದರು.