ನವದೆಹಲಿ : ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾದ ಅಸ್ಥಿರತೆಯ ನಡುವೆ, ದೇಶದಲ್ಲಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ದರ ಭಾರೀ ಏರಿಕೆಯಾಗಿದೆ. ಮೇ 1ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ₹993ರಷ್ಟು ಹೆಚ್ಚಳ ಮಾಡಲಾಗಿದೆ.
ಈ ದರ ಏರಿಕೆಯಿಂದಾಗಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸಿಲಿಂಡರ್ ಬೆಲೆ ₹3,071.50ಕ್ಕೆ ಏರಿದೆ. ಈಗಾಗಲೇ ಎಲ್‍ಪಿಜಿ ಸರಬರಾಜಿನಲ್ಲಿ ತೊಂದರೆ ಅನುಭವಿಸುತ್ತಿರುವ ವ್ಯಾಪಾರಿಗಳಿಗೆ ಇದು ಮತ್ತಷ್ಟು ಹೊರೆ ತಂದಿದೆ.
ಇಂಧನ ಕಂಪನಿಗಳ ಪ್ರಕಾರ, ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆಯ ಅಸ್ಥಿರತೆ, ಸರಬರಾಜು ಸರಪಳಿ ವೆಚ್ಚದ ಏರಿಕೆ ಹಾಗೂ ರೂಪಾಯಿ ಮೌಲ್ಯದ ಕುಸಿತ—ಚಿಟಟ ಸೇರಿ ಈ ದರ ಏರಿಕೆಗೆ ಕಾರಣವಾಗಿದೆ.
ಹೋಟೆಲ್‍ಗಳಿಗೆ ಹೊಡೆತ, ಗ್ರಾಹಕರಿಗೆ ಪರಿಣಾಮ
ಈ ದರ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಬೇಕರಿ ಉದ್ಯಮಗಳಿಗೆ ನೇರ ಹೊಡೆತ ಬೀಳಲಿದೆ. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಆಹಾರ ಪದಾರ್ಥಗಳ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ.
ಗೃಹ ಬಳಕೆಗೆ ತಾತ್ಕಾಲಿಕ ರಿಲೀಫ್
ಇನ್ನೊಂದೆಡೆ, 14.2 ಕೆಜಿ ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸರ್ಕಾರದ ಸಬ್ಸಿಡಿ ವ್ಯವಸ್ಥೆಯಿಂದ ಗೃಹ ಬಳಕೆದಾರರಿಗೆ ಸದ್ಯಕ್ಕೆ ನಿರಾಳತೆ ಸಿಕ್ಕಿದೆ.
ವಾಣಿಜ್ಯ ಎಲ್‍ಪಿಜಿ ದರದ ಭಾರೀ ಏರಿಕೆ ದೇಶದ ಸಣ್ಣ ವ್ಯಾಪಾರಿಗಳಿಂದ ಹಿಡಿದು ಸಾಮಾನ್ಯ ಗ್ರಾಹಕರವರೆಗೆ ಎಲ್ಲರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಆಹಾರ ದರ ಏರಿಕೆ ಅನಿವಾರ್ಯವಾಗುವ ಲಕ್ಷಣಗಳು ಕಾಣಿಸುತ್ತಿವೆ.