ಬೆಂಗಳೂರು: ಕಡ್ಡಾಯ ಕನ್ನಡ ಕಲಿಕೆಯನ್ನು ಬದಿಗಿಟ್ಟು ಮಕ್ಕಳ ಕನ್ನಡ ಕಲಿಕೆಗೆ ಅಡ್ಡಿಗಾಲು ಹಾಕುವಂತಹ ಆದೇಶ ನೀಡಿದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ ಸರ್ಕಾರ ನೀಡುವ 'ನಿರಾಕ್ಷೇಪಣಾ ಪತ್ರ'ದ ನಿಯಮಗಳಲ್ಲಿ ಪರಿಷ್ಕರಣೆ ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಮುಖೇನ ಅವರು ತಿಳಿಸಿರುವ ಅವರು, ಇತ್ತೀಚೆಗೆ ಸಿಬಿಎಸ್ ಹೊರಡಿಸಿದ ಶಿಕ್ಷಣದಲ್ಲಿ ಕನ್ನಡ ಭಾಷೆ ಬದಿಗಡುವ ಆದೇಶವನ್ನು ಖಂಡಿಸಿದರು.
ರಾಜ್ಯದಲ್ಲಿ 2015 ರಿಂದಲೂ ಜಾರಿಯಲ್ಲಿರುವ ಕನ್ನಡ ಭಾಷೆ ಕಲಿಕಾ ಕಾಯ್ದೆಗೆ ವಿರುದ್ಧವಾಗುವ ರೀತಿಯಲ್ಲಿ ಸಿಬಿಎಸ್ಇ ಮಂಡಳಿಯು ಇದೇ ಮೇ 15 ರಂದು ತನ್ನ ಅಧೀನದ ಎಲ್ಲ ಶಾಲಾ ಮುಖ್ಯಸ್ಥರುಗಳಿಗೆ ಸೂಚನೆ ನೀಡಿರುವ ಕ್ರಮ ಆಕ್ಷೇಪಾರ್ಹವಾಗಿದೆ.
ಕೂಡಲೇ ಮಂಡಳಿ ಹೊರಡಿಸಿರುವ ಆದೇಶವನ್ನು ತಕ್ಷಣವೇ ಹಿಂಪಡೆದು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವು ಒತ್ತಾಯಿಸಬೇಕು. ಮುಖ್ಯವಾಗಿ ನಿರಾಕ್ಷೇಪಣಾ ಪತ್ರ ನೀಡಿಕೆ (ಎನ್.ಒ.ಸಿ.) ನಿಯಮಗಳ ಸಮಗ್ರ ಪರಿಷ್ಕರಣೆಗೆ ಮುಂದಾಗಬೇಕೆಂದು ಎಂದು ಅವರು ಒತ್ತಾಯಿಸಿದ್ದಾರೆ.
ಭಾಷಾ ಕಾನೂನಿನ ವಿರುದ್ಧದ ಆದೇಶ
ಕನ್ನಡ ಭಾಷೆ ಕಲಿಕೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸುವಾಗ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೇ ತೆಗೆದುಕೊಳ್ಳದೇ ಸಿಬಿಎಸ್ಇ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದೆ. ರಾಜ್ಯವು ಜಾರಿಗೊಳಿಸಿರುವ ಭಾಷಾ ಕಾನೂನುಗಳನ್ನು ದುರ್ಬಲಗೊಳಿಸುವ ಅಥವಾ ಅದರ ವಿರುದ್ಧದ ಆದೇಶ ಇದಾಗಿದ್ದು, ಸಿಬಿಎಸ್‍ಇಯ ಇಂತಹ ಈ ಕ್ರಮ ಸ್ವೀಕಾರಾರ್ಹವಲ್ಲ ಎಂದು ವಿವರಿಸಿದರು.
ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಕಡ್ಡಾಯ
ಕನ್ನಡ ಭಾಷಾ ಕಲಿಕಾ ಕಾಯ್ದೆಯು ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಕಲಿಕೆ ಕಡ್ಡಾಯಗೊಳಿಸಿದೆ. ಕನ್ನಡವನ್ನು ಮೊದಲ ಅಥವಾ ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಪ್ರತಿ ವಿದ್ಯಾರ್ಥಿಗೆ ಇದೆ. ಈ ನೆಲದಲ್ಲಿ ಕನ್ನಡ ಉಳಿಯುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂಬುದನ್ನು ಅವರು ನೆನಪಿಸಿದರು.