ರಾಯಚೂರು: ಮಂತ್ರಾಲಯದ ಸಮೀಪದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾಗಿರುವ ಹೃದಯವಿದ್ರಾವಕ ಘಟನೆ ಭಾನುವಾರ ಸಂಭವಿಸಿದೆ. ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಂಬಂಧಿಕರ ಗುಂಪು ಕ್ಷಣಾರ್ಧದಲ್ಲಿ ದುರಂತಕ್ಕೆ ತುತ್ತಾಗಿದೆ.
ಮೃತರಾದವರನ್ನು ಹೈದರಾಬಾದ್ ಮೂಲದ ಯುವನ್ ಚಂದ್ರ, ಸತೀಶ್, ಮಂತ್ರಾಲಯ ಗ್ರಾಮದ ರಾಘವೇಂದ್ರ, ಧನುಷ್ ಹಾಗೂ ಉರವಕೊಂಡದ ಸಂಧ್ಯಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಪರ್ಣಾ ಎಂಬ ಯುವತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಮಂತ್ರಾಲಯದಲ್ಲಿರುವ ಸಂಬಂಧಿಕರ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆ ಬಳಿಕ ಯುವಕರು ಹಾಗೂ ಯುವತಿಯರು ತುಂಗಭದ್ರಾ ನದಿಗೆ ಈಜಲು ತೆರಳಿದ್ದರು. ಈ ವೇಳೆ ನದಿಯ ಆಳವನ್ನು ಅಂದಾಜಿಸಲು ವಿಫಲರಾದ ಅವರು ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಇದುವರೆಗೆ ಧನುಷ್ ಅವರ ಮೃತದೇಹ ಪತ್ತೆಯಾಗಿದ್ದು, ಉಳಿದವರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.
ಸಂಭ್ರಮದ ಕ್ಷಣಗಳು ಕೆಲವೇ ಕ್ಷಣಗಳಲ್ಲಿ ಶೋಕಸಾಗರವಾಗಿ ಮಾರ್ಪಟ್ಟ ಈ ಘಟನೆ ಮಂತ್ರಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ.