ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ವಾರಗಳಿಂದ ಮೊಟ್ಟೆ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬAದಿದ್ದು, ಗ್ರಾಹಕರಿಗೆ ಸಂತಸದ ಸುದ್ದಿ ನೀಡಿದೆ. ಮೊದಲು ಒಂದು ಮೊಟ್ಟೆಯ ಬೆಲೆ ರೂ.7.06 ಇದ್ದರೆ, ಇದೀಗ ಅದು ರೂ.4.60ಕ್ಕೆ ಇಳಿದಿದೆ. ಬೆಲೆ ಇಳಿಕೆಯಿಂದ ಗ್ರಾಹಕರು ಖುಷಿಪಟ್ಟಿದ್ದರೆ, ಕೋಳಿ ಸಾಕಾಣಿಕೆದಾರರಲ್ಲಿ ಆತಂಕ ಉಂಟಾಗಿದೆ.
ರಫ್ತು ವ್ಯತ್ಯಯ, ಹಬ್ಬದ ಕಾಲದಲ್ಲಿ ಬೇಡಿಕೆ ಕುಸಿತ ಮತ್ತು ಬೇಸಿಗೆ ಆರಂಭವಾಗಿರುವುದು ಮೊಟ್ಟೆ ದರ ಇಳಿಕೆಗೆ ಪ್ರಮುಖ ಕಾರಣಗಳೆಂದು ಹೇಳಲಾಗುತ್ತಿದೆ. ಕಳೆದ ಸುಮಾರು 15 ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಮೊಟ್ಟೆ ದರದಲ್ಲಿ ದೊಡ್ಡ ಮಟ್ಟದ ಕುಸಿತ ಕಂಡುಬAದಿದೆ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ಮಾಹಿತಿ ನೀಡಿದೆ.
ರಾಜ್ಯದಲ್ಲಿ ಪ್ರತಿದಿನ ಸುಮಾರು 2.2 ಕೋಟಿ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಅವುಗಳಲ್ಲಿ ಒಂದು ಭಾಗವನ್ನು ತಮಿಳುನಾಡಿನ ನಾಮಕ್ಕಲ್ ಕೇಂದ್ರಕ್ಕೆ ಕಳುಹಿಸಿ ಅಲ್ಲಿಂದ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಸಾಮಾನ್ಯವಾಗಿ ನಾಮಕ್ಕಲ್‌ನಿಂದ ದಿನಕ್ಕೆ ಸುಮಾರು 70 ಲಕ್ಷದಿಂದ 1 ಕೋಟಿ ಮೊಟ್ಟೆಗಳು ಗಲ್ಫ್ ದೇಶಗಳಿಗೆ ಸಾಗುತ್ತವೆ.
ಆದರೆ ಇತ್ತೀಚಿನ ಯುದ್ಧ ಪರಿಸ್ಥಿತಿಗಳ ಪರಿಣಾಮವಾಗಿ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆಗಳ ಸಂಗ್ರಹ ಹೆಚ್ಚಾಗಿದೆ. ಇದೂ ಸಹ ದರ ಕುಸಿತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಹೊಸಪೇಟೆ ಮೊಟ್ಟೆ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ಮೈಸೂರು ಎರಡನೇ ಸ್ಥಾನದಲ್ಲಿದೆ.
ಇದಕ್ಕೆ ಜೊತೆಗೆ ಹಬ್ಬದ ಸೀಸನ್ ಕೂಡ ಬೆಲೆ ಇಳಿಕೆಗೆ ಕಾರಣವಾಗಿದೆ. ರಂಜಾನ್ ಅವಧಿಯಲ್ಲಿ ಕೆಲ ಸಮುದಾಯಗಳಲ್ಲಿ ಮೊಟ್ಟೆ ಬಳಕೆ ಕಡಿಮೆಯಾಗುತ್ತದೆ. ಈಸ್ಟರ್ ಹಬ್ಬ ಹಾಗೂ ಬೇಸಿಗೆ ಆರಂಭವಾಗಿರುವುದರಿAದ ಸಾಮಾನ್ಯವಾಗಿ ಮೊಟ್ಟೆ ಬೇಡಿಕೆ ಇಳಿಕೆಯಾಗುತ್ತದೆ.
ಬೆಲೆ ಇಳಿಕೆಯಾಗಿದ್ದರೂ ಉತ್ಪಾದನೆ ಕಡಿಮೆಯಾಗಿಲ್ಲ. ಪರಿಣಾಮವಾಗಿ ಹೆಚ್ಚುವರಿ ಮೊಟ್ಟೆಗಳನ್ನು ಶೀತಗೃಹಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಶೀತಗೃಹಗಳಲ್ಲಿ ಮೊಟ್ಟೆಗಳನ್ನು ಸುಮಾರು ಮೂರು ತಿಂಗಳುಗಳವರೆಗೆ ಸಂರಕ್ಷಿಸಬಹುದು.
ಕೆಲ ಹೆಚ್ಚುವರಿ ಮೊಟ್ಟೆಗಳನ್ನು ಎಗ್ ಪೌಡರ್ ಆಗಿ ಪರಿವರ್ತಿಸಲಾಗುತ್ತಿದೆ. ತಾಜಾ ಮೊಟ್ಟೆಗಳು ಸುಲಭವಾಗಿ ದೊರೆಯದ ದೇಶಗಳಿಗೆ ಈ ಪೌಡರ್ ರಫ್ತು ಮಾಡಲಾಗುತ್ತದೆ. ಭಾರತದಲ್ಲಿ ನಾಮಕ್ಕಲ್, ಮುಂಬೈ ಹಾಗೂ ಕೋಲಾರ ಜಿಲ್ಲೆಯ ಮಾಲೂರು ಪ್ರದೇಶಗಳಲ್ಲಿ ಎಗ್ ಪೌಡರ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಮಾಲೂರಿನಲ್ಲಿ ಪ್ರತಿದಿನ ಸುಮಾರು 12 ಲಕ್ಷ ಮೊಟ್ಟೆಗಳನ್ನು ಸಂಸ್ಕರಿಸಲಾಗುತ್ತಿದೆ.
ಇದರಿAದಾಗಿ ಮೊಟ್ಟೆ ಬೆಲೆ ಕುಸಿತ ಕೋಳಿ ಸಾಕಾಣಿಕೆದಾರರಿಗೆ ನಷ್ಟದ ಭೀತಿ ಉಂಟುಮಾಡಿದೆ. ಆಹಾರ, ಸಾರಿಗೆ ಮತ್ತು ನಿರ್ವಹಣಾ ವೆಚ್ಚಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ದರ ಇಳಿಕೆಯಾಗಿರುವುದು ಉತ್ಪಾದಕರಿಗೆ ದೊಡ್ಡ ಸವಾಲಾಗಿದೆ.
ಗಲ್ಫ್ ರಾಷ್ಟ್ರಗಳಿಗೆ ಮೊಟ್ಟೆ ರಫ್ತು ಮತ್ತೆ ಆರಂಭವಾದರೆ ಮಾರುಕಟ್ಟೆ ಸ್ಥಿರವಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ರಾಜ್ಯದ ಮೊಟ್ಟೆ ಮಾರುಕಟ್ಟೆ ಅನಿಶ್ಚಿತತೆಯಲ್ಲೇ ಮುಂದುವರಿಯುವ ಸಾಧ್ಯತೆ ಇದೆ ಎಂದು ಎನ್‌ಇಸಿಸಿಯ ಮಾರಾಟ ಪ್ರಚಾರ ಅಧಿಕಾರಿ ವಿ. ಶೇಷನಾರಾಯಣ್ ತಿಳಿಸಿದ್ದಾರೆ.