ದಾವಣಗೆರೆ: ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. "ಸಿದ್ದರಾಮಯ್ಯ ಅವರನ್ನು ಅನ್ನರಾಮಯ್ಯ ಎನ್ನುವುದಕ್ಕಿಂತ ಕನ್ನರಾಮಯ್ಯ ಎನ್ನಬಹುದು" ಎಂದು ಅವರು ಲೇವಡಿ ಮಾಡಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು.
ಕೈಗಾರಿಕಾ ಅಭಿವೃದ್ಧಿಗೆ ರಾಜ್ಯದ ಅಡ್ಡಿ
ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಕೈಗಾರಿಕೆಗಳ ಪುನರುಜ್ಜೀವನಕ್ಕೆ ಸಿದ್ಧವಿದ್ದರೂ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಹೆಚ್‌ಡಿಕೆ ಕಿಡಿಕಾರಿದರು. ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ ಕೇಂದ್ರವು 1,700 ಕೋಟಿ ರೂಪಾಯಿ ಮೂಲಧನ ನೀಡಿದ್ದರೂ, ರಾಜ್ಯ ಸರ್ಕಾರ ವಿನಾಕಾರಣ ಕಂಪನಿಯನ್ನು ಮುಚ್ಚಿಸಲು ಸಂಚು ರೂಪಿಸಿದೆ. ಅರಣ್ಯ ಕಾಯ್ದೆಯ ನೆಪವೊಡ್ಡಿ ಹೆಚ್‌ಎಂಟಿ ಕಾರ್ಖಾನೆಯ ಅಭಿವೃದ್ಧಿಗೂ ಅಡ್ಡಗಾಲು ಹಾಕಲಾಗುತ್ತಿದೆ. "ವಿಶಾಖಪಟ್ಟಣದಲ್ಲಿ 35,000 ಕೋಟಿ ಸಾಲವಿದ್ದ ಕಾರ್ಖಾನೆಯನ್ನು ನಾವು ಪುನಾರಂಭಿಸಿದ್ದೇವೆ. ಕರ್ನಾಟಕ ಸರ್ಕಾರ ಆಂಧ್ರಪ್ರದೇಶವನ್ನು ನೋಡಿ ಪಾಠ ಕಲಿಯಲಿ," ಎಂದು ಅವರು ಸಲಹೆ ನೀಡಿದರು.
'ಅನ್ನಭಾಗ್ಯ' ಕ್ರೆಡಿಟ್ ವಾರ್
ಕೇಂದ್ರ ಸರ್ಕಾರ ನೀಡುವ ಪಡಿತರವನ್ನು ಹಂಚಿ ಸಿದ್ದರಾಮಯ್ಯ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.
"ಕೇಂದ್ರದಿAದ ಪಡಿತರ ಕೊಟ್ಟಿದ್ದು ನಾವು. ಆದರೆ ಕಾಂಗ್ರೆಸ್ ನವರು ಅದನ್ನು ತಾವು ಕೊಟ್ಟಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ಇವರು ಅನ್ನರಾಮಯ್ಯ ಅಲ್ಲ, ಕನ್ನರಾಮಯ್ಯ," ಎಂದು ಟೀಕಿಸಿದರು.
ಅಹಿಂದ ಮತ್ತು ಕುಟುಂಬ ರಾಜಕಾರಣ
ಮುಖ್ಯಮಂತ್ರಿಗಳಿಗೆ ಕೇವಲ ಸಂಕಷ್ಟದ ಸಮಯದಲ್ಲಿ ಮಾತ್ರ ಹಿಂದುಳಿದ ವರ್ಗಗಳು ನೆನಪಾಗುತ್ತವೆ ಎಂದು ಕುಮಾರಸ್ವಾಮಿ ಆರೋಪಿಸಿದರು. "ಸ್ಥಾನಕ್ಕೆ ಧಕ್ಕೆ ಬಂದಾಗ ಮಾತ್ರ ಸಿದ್ದರಾಮಯ್ಯ ಅವರಿಗೆ ಅಹಿಂದ ನೆನಪಾಗುತ್ತದೆ. ಅಧಿಕಾರ ಸುರಕ್ಷಿತವಾಗಿದ್ದಾಗ ಅವರು ಯಾರನ್ನೂ ಕೇಳುವುದಿಲ್ಲ."
ಕುಟುಂಬ ರಾಜಕಾರಣ: ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ತಮ್ಮ ಮಗನನ್ನು ರಾಜಕೀಯಕ್ಕೆ ತಂದಿದ್ದು ಯಾಕೆ? ವರ್ಗಾವಣೆ ದಂಧೆಗಾಗಿಯೇ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಹೋಲಿಕೆ ಮತ್ತು ಪ್ರಶ್ನೆಗಳು
ಮನೆಗಳ ನಿರ್ಮಾಣ: 15 ಲಕ್ಷ ಮನೆ ಕಟ್ಟಲು 28 ಸಾವಿರ ಕೋಟಿ ಬೇಕು, ಆದರೆ ರಾಜ್ಯ ಸರ್ಕಾರ ಕೇವಲ 2 ಸಾವಿರ ಕೋಟಿ ಇಟ್ಟಿದೆ.
ಖರ್ಗೆಗೆ ಪ್ರಶ್ನೆ: ದೇವೇಗೌಡರು ವೀಲ್ ಚೇರ್‌ನಲ್ಲಿ ಹೋಗಿ ಭದ್ರಾ ಮೇಲ್ದಂಡೆ ಯೋಜನೆಗಾಗಿ ಧ್ವನಿ ಎತ್ತಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಸಮಸ್ಯೆಗಳ ಬಗ್ಗೆ ಎಷ್ಟು ಬಾರಿ ಮಾತನಾಡಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಜಾಗತಿಕವಾಗಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಗಳಿದ್ದರೂ, ಪ್ರಧಾನಿ ಮೋದಿಯವರು ವಿದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ದೇಶದ ಜನರಿಗೆ ತೊಂದರೆಯಾಗದAತೆ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ಪ್ರಧಾನಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು.