ಬಳ್ಳಾರಿ: ಮಧ್ಯ ಏಷ್ಯಾದ ಕೊಲ್ಲಿ ರಾಷ್ಟ್ರಗಳ ನಡುವೆ ನಡೆಯುತ್ತಿರುವ ತೀವ್ರ ಸಂಘರ್ಷದ ಬಿಸಿ ಇದೀಗ ಬಳ್ಳಾರಿಯ ಸಾಮಾನ್ಯ ಜನರ ಬದುಕಿಗೆ ತಟ್ಟಿದೆ. ಅಂತರಾಷ್ಟ್ರೀಯ ಮಟ್ಟದ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಹಾಗೂ ಆಟೋ ಎಲ್‌ಪಿಜಿ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಬಳ್ಳಾರಿ ನಗರದ ಎಲ್ಲಾ ೭ ಆಟೋ ಎಲ್‌ಪಿಜಿ ಬಂಕ್‌ಗಳು ‘ನೋ ಸ್ಟಾಕ್’ ಬೋರ್ಡ್ ಪ್ರದರ್ಶಿಸುತ್ತಿವೆ.
ಕಳೆದ ಎರಡು ದಿನಗಳಿಂದ ಬಳ್ಳಾರಿಯ ಏಳೂ ಅಟೋ ಗ್ಯಾಸ್ ಬಂಕ್‌ಗಳಲ್ಲಿ ಅನಿಲ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬಂಕ್‌ಗಳ ಮುಂದೆ “ಗ್ಯಾಸ್ ಇಲ್ಲ" (NO STOCK)ಎಂಬ ನಾಮಫಲಕಗಳು ರಾರಾಜಿಸುತ್ತಿವೆ. ಗ್ಯಾಸ್ ಸಿಗಬಹುದೆಂಬ ಆಸೆಯಿಂದ ಬಂದ ಚಾಲಕರು ಅನಿಲವಿಲ್ಲದೆ ತಮ್ಮ ಆಟೋಗಳನ್ನು ಕೈಯಿಂದಲೇ ತಳ್ಳಿಕೊಂಡು ಹೋಗುತ್ತಿರುವ ದೃಶ್ಯಗಳು ನಗರದಾದ್ಯಂತ ಕಂಡುಬರುತ್ತಿವೆ. ಇದರಿಂದಾಗಿ ನಗರದ ಸಾರಿಗೆ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರಿದೆ.
“ಸರ್ಕಾರ ನೆರವಾಗಲಿ”: ಚಾಲಕರ ಅಳಲು
ಗ್ಯಾಸ್ ಸಮಸ್ಯೆಯಿಂದ ಕಂಗೆಟ್ಟಿರುವ ಆಟೋ ಚಾಲಕ ರಾಜಾಸಾಬ್ ಮಾತನಾಡಿ, “ಯುದ್ಧ ಎಲ್ಲಿಯೋ ನಡೆಯುತ್ತಿದೆ, ಆದರೆ ಅದರ ಶಿಕ್ಷೆ ನಮಗೆ ಸಿಗುತ್ತಿದೆ. ಗ್ಯಾಸ್ ಇಲ್ಲದೆ ದುಡಿಮೆ ಸ್ಥಗಿತಗೊಂಡಿದೆ, ಜೀವನ ಸಾಗಿಸುವುದು ಕಷ್ಟವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅನಿಲ ಪೂರೈಕೆಯನ್ನು ಸುಗಮಗೊಳಿಸಬೇಕು. ರಾಜ್ಯ ಸರ್ಕಾರವೂ ಆದ್ಯತೆಯ ಮೇಲೆ ಆಟೋ ಚಾಲಕರ ಸಂಕಷ್ಟಕ್ಕೆ ಸ್ಪಂದಿಸಬೇಕು,” ಎಂದು ಮನವಿ ಮಾಡಿದ್ದಾರೆ.
ಬಳ್ಳಾರಿಯಲ್ಲಷ್ಟೇ ಅಲ್ಲದೆ, ರಾಜ್ಯದ ಇತರ ಪ್ರಮುಖ ನಗರಗಳಲ್ಲೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗುವ ಆತಂಕವಿದೆ. ಸಮರ್ಪಕ ಪೂರೈಕೆಗೆ ಸರ್ಕಾರಗಳು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಆಟೋ ಚಾಲಕರು ಮಾತ್ರವಲ್ಲದೆ, ಸಾಮಾನ್ಯ ಜನಜೀವನ ಕೂಡ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ.