ಬಳ್ಳಾರಿ : ಹಣ ಮತ್ತು ಬಂಗಾರದ ಆಭರಣಗಳ ಆಸೆಗಾಗಿ ಸ್ವಂತ ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಮೊಮ್ಮಗನನ್ನು ಬಂಧಿಸಿ, ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಮ್ಮಗನೋರ್ವ ಹಣ ಮತ್ತು ಬಂಗಾರದ ಆಭರಣಗಳ ಆಸೆಗಾಗಿ ಸ್ವಂತ ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ನಂತರ ಸಾಕ್ಷಿ ನಾಶಪಡಿಸಲು ಮೃತದೇಹಕ್ಕೆ ಬೆಂಕಿ ಹಚ್ಚಿ ಆಕಸ್ಮಿಕ ಸಾವು ಎಂಬಂತೆ ಬಿಂಬಿಸಲು ಯತ್ನ ಪಟ್ಟ ಬೆಚ್ಚಿಬೀಳಿಸುವ ಘಟನೆ ಇತ್ತೀಚೆಗೆ ಕಾರೇಕಲ್ಲು ಗ್ರಾಮದಲ್ಲಿ ನಡೆದಿತ್ತು
ಘಟನೆಯ ಹಿನ್ನೆಲೆ:
ಕಳೆದ ಮಾರ್ಚ್ 21 ರಂದು ಕಾರೇಕಲ್ಲು ಗ್ರಾಮದ ವೀರಮ್ಮ (60 ವರ್ಷ) ಎಂಬುವವರು ತಮ್ಮ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಆರಂಭದಲ್ಲಿ ಇದನ್ನು ‘ಅನುಮಾನಾಸ್ಪದ ಸಾವು’ (UDR) ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಆದರೆ, ಮಾರ್ಚ್ 24ರಂದು ಬಂದ ಮರಣೋತ್ತರ ಪರೀಕ್ಷಾ ವರದಿಯು ಇದು ಆಕಸ್ಮಿಕ ಸಾವಲ್ಲ, ಬದಲಾಗಿ ಹರಿತವಾದ ಆಯುಧದಿಂದ ನಡೆದ ‘ಕೊಲೆ’ ಎಂಬ ಸತ್ಯವನ್ನು ಹೊರಹಾಕಿದೆ.
ತನಿಖೆ ವೇಳೆ ಬಯಲಾದ ಕ್ರೌರ್ಯ:
ಪ್ರಕರಣದ ಗಂಭೀರತೆ ಅರಿತ ಡಿ.ಎಸ್.ಪಿ. ಮಾಲತೇಶ ಕೂನಬೇವು ಮತ್ತು ಸಿರುಗುಪ್ಪ ಸಿ.ಪಿ.ಐ. ಟಿ. ಸುಭಾಷ್ ಚಂದ್ರ ನೇತೃತ್ವದ ವಿಶೇಷ ತಂಡವು ತನಿಖೆ ಆರಂಭಿಸಿತು. ಮೃತ ವೀರಮ್ಮಳ ಮೊಮ್ಮಗ ಎಂ. ವೀರೇಂದ್ರ (21 ವರ್ಷ) ಎಂಬಾತನ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.
ಅಜ್ಜಿಯ ಬಳಿ ಇದ್ದ ನಗದು ಮತ್ತು ಬಂಗಾರವನ್ನು ಲಪಟಾಯಿಸಲು ನಿರ್ಧರಿಸಿದ್ದ ವೀರೇಂದ್ರ, ಮಾರ್ಚ್ 20ರ ರಾತ್ರಿ ಅಜ್ಜಿಯ ಮನೆಯಲ್ಲೇ ಉಳಿದುಕೊಂಡಿದ್ದ. ತಡರಾತ್ರಿ ಅಜ್ಜಿ ನಿದ್ರಿಸುತ್ತಿದ್ದಾಗ ಚಾಕುವಿನಿಂದ ಕುತ್ತಿಗೆ ಕೊಯ್ದು ಕ್ರೂರವಾಗಿ ಹತ್ಯೆ ಮಾಡಿದ್ದನು. ಕೊಲೆಯ ನಂತರ ಮನೆಯ ಬೀರುವಿನಲ್ಲಿದ್ದ ರೂ. 23,000 ನಗದು ಮತ್ತು 80 ಗ್ರಾಂ ತೂಕದ ಆಭರಣಗಳನ್ನು ದೋಚಿದ್ದನು. ಆದರೆ ವ್ಯಂಗ್ಯವೆಂದರೆ, ಆತ ದೋಚಿದ 80 ಗ್ರಾಂ ಆಭರಣಗಳು ಅಸಲಿ ಬಂಗಾರವಾಗಿರದೆ ನಕಲಿ ಬಂಗಾರ ಆಗಿದ್ದವು. ಕೃತ್ಯದ ಬಳಿಕ ಸಾಕ್ಷಿ ನಾಶಪಡಿಸಲು ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದನು.
ಆರೋಪಿ ಬಂಧನ ಮತ್ತು ಕದ್ದ ಮಾಲು ವಶ:
ತನ್ನ ತಂದೆಯ ಊರಾದ ಸಿರುಗುಪ್ಪ ತಾಲೂಕಿನ ಹಾಗಲೂರು ಗ್ರಾಮದಲ್ಲಿ ಅವಿತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ಬಚ್ಚಿಟ್ಟಿದ್ದ ಕೊಲೆಗೆ ಬಳಸಿದ ಚಾಕು, ರಕ್ತಸಿಕ್ತ ಬಟ್ಟೆಗಳು, ನಗದು ಹಣ ಮತ್ತು 80 ಗ್ರಾಂ ನಕಲಿ ಚಿನ್ನದ ಆಭರಣಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಟಿಲವಾಗಿದ್ದ ಈ ಕೊಲೆ ಪ್ರಕರಣವನ್ನು ಕೇವಲ ಮೂರೇ ದಿನಗಳಲ್ಲಿ ಬೇಧಿಸಿದ ಪಿ.ಡಿ. ಹಳ್ಳಿ ವೃತ್ತದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಡಾ|| ಸುಮನ್ ಡಿ. ಪನ್ನೇಕರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.