LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
State News

ಕೊಡಗಿನಲ್ಲಿ ಮಳೆ.. ಮೈಸೂರಿನ ಧನುಷ್ಕೋಟಿಗೆ ಜೀವಕಳೆ...

ಬೆಂಗಳೂರು: ಕಾವೇರಿ ತವರು ಕೊಡಗಿನಲ್ಲಿ ಮಳೆಯಾದರೆ ಸಾಕು ಕಾವೇರಿ ನದಿಯಿಂದ ಸೃಷ್ಟಿಯಾದ ಜಲಧಾರೆಗಳಿಗೆ ಜೀವಕಳೆ ಬಂದು ಬಿಡುತ್ತದೆ. ಅದರಲ್ಲೂ ವಾಡಿಕೆಯ ಮುಂಗಾರು ಆರಂಭದ ಮುನ್ನವೇ ರೋಹಿಣಿ ಮಳೆ ಅಬ್ಬರಿಸಿದ ಪರಿಣಾಮ ನಡು ಮಳೆಗಾಲದಲ್ಲೂ ಸುರಿಯದಂತೆ ಮಳೆ ಈ ಬಾರಿ ಕೊಡಗಿನಲ್ಲಿ ಸುರಿದಿದೆ. ಹೀಗಾಗಿ ಕಾವೇರಿ ತುಂಬಿ ಹರಿದಿದ್ದು ಪರಿಣಾಮ ಕಾವೇರಿ ಸೃಷ್ಟಿಯ ಮೈಸೂರು ಜಿಲ್ಲೆಯ ಕೆ.ಆರ್.ನಗರ ಬಳಿಯಿರುವ ಧನುಷ್ಕೋಟಿ ಜಲಧಾರೆಯ ಥಕಥೈ ಶುರುವಾಗಿದ್ದು, ನೋಡುಗರ ಮನಸೆಳೆಯುತ್ತಿದೆ.
ಸಾಮಾನ್ಯವಾಗಿ ಈ ಸಮಯದಲ್ಲಿ ನಿಧಾನವಾಗಿ ಮಳೆ ಆರಂಭವಾಗುತ್ತಿದ್ದುದರಿಂದ ನದಿಗಳಲ್ಲಾಗಲೀ, ಜಲಪಾತಗಳಲ್ಲಾಗಲೀ ರೌದ್ರತೆಯನ್ನು ಕಾಣುವುದು ಅಪರೂಪವಾಗುತ್ತಿತ್ತು. ಆದರೆ ಈ ವರ್ಷ ಅದಕ್ಕೆಲ್ಲ ಅಪವಾದ ಎಂಬಂತೆ ಜಲಪಾತಗಳು ಭೋರ್ಗರೆಯುವಂತೆ, ನದಿಗಳು ಧುಮ್ಮಿಕ್ಕುವಂತೆ ಆರಂಭದ ಮುಂಗಾರು ಅದರಲ್ಲೂ ರೋಹಿಣಿ ಮಳೆ ಮಾಡಿದೆ. ಹೀಗಾಗಿ ನಿಸರ್ಗದ ನಡುವಿನ ಜಲಪಾತಗಳಿಗೆ ಜೀವಕಳೆ ಬಂದಿದ್ದು ನಯನಮನೋಹರವಾಗಿ ಕಂಗೊಳಿಸುತ್ತಿವೆ. ಈ ಪೈಕಿ ಧನುಷ್ಕೋಟಿಯೂ ಒಂದಾಗಿದೆ.
ಇದೀಗ ಧನುಷ್ಕೋಟಿ ಜಲಪಾತದತ್ತ ತೆರಳುವವರಿಗೆ ತನ್ನ ರೌದ್ರತೆಯನ್ನು ತೆರೆದಿಟ್ಟಂತೆ ಭಾಸವಾಗುತ್ತಿದೆ. ಬೇಸಿಗೆಯ ಬಿಸಿಲಿಗೆ ಸಿಲುಕಿ ಹೆಬ್ಬಂಡೆಗಳಲ್ಲಿ ಲೀನವಾಗಿ ಹೋಗಿದ್ದ ಜಲಧಾರೆ ಆರಂಭದ ಮುಂಗಾರಿಗೆ ರೋಹಿಣಿ ಮಳೆಯ ಅಭಯಕ್ಕೆ ಮರುಹುಟ್ಟು ಪಡೆದು ಹೆಬ್ಬಂಡೆಗಳ ಮೇಲೆ ಮತ್ತು ನಡುವೆ ಭೋರ್ಗೆರೆದು ಧುಮುಕುತ್ತಾ ನೋಡುಗರನ್ನು ತನ್ನ ಸ್ನಿಗ್ಧ ಸೌಂದರ್ಯದಿಂದ ಆಕರ್ಷಿಸಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಮುಂಗಾರು ಬಿರುಸುಗೊಂಡರೆ ಇದರ ಆರ್ಭಟ ಇನ್ನಷ್ಟು ಹೆಚ್ಚಾಗಲಿದೆ.
ಧನುಷ್ಕೋಟಿ ಜಲಪಾತ ಮೈಸೂರಿಗರಿಗೆ ಮಾತ್ರವಲ್ಲದೆ ದೂರದಿಂದ ಬರುವ ಪ್ರವಾಸಿಗರಿಗೆ ಮುದನೀಡುವ ಜಲಪಾತವಾಗಿದೆ. ಇದು ಹಿಂಗಾರಿನಲ್ಲಿ ಸೌಮ್ಯವಾಗಿ, ಬೇಸಿಗೆಯಲ್ಲಿ ಸೊರಗಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮೈಕೈ ತುಂಬಿಕೊಂಡ ಚೆಲುವೆಯಂತೆ ಗೋಚರಿಸುತ್ತದೆ. ಅಷ್ಟೇ ಅಲ್ಲ ತಾನೆಷ್ಟು ಸುಂದರಿಯೋ ಅಷ್ಟೇ ಭಯಂಕರಿ ಎಂಬುದನ್ನು ಅಬ್ಬರಿಸುವ ಮೂಲಕ ತೆರೆದಿಡುತ್ತದೆ. ಇಂತಹದೊಂದು ಸುಂದರ ದೃಶ್ಯವನ್ನು ನೋಡಲೆಂದೇ ಪ್ರವಾಸಿಗರು ಇಲ್ಲಿಗೆ ತೆರಳುವುದು ಕಂಡು ಬರುತ್ತಿದೆ. ಹೀಗೆ ತೆರಳುವ ಪ್ರವಾಸಿಗರ ಸನಿಹಕ್ಕೆ ತೆರಳದೆ ದೂರದಿಂದಲೇ ಕಣ್ತುಂಬಿಕೊಂಡು ಬಂದರೆ ಒಳ್ಳೆಯದು. ಅಷ್ಟೇ ಅಲ್ಲ ಕಳಕಳಿಯ ಮನವಿಯಾಗಿದೆ.
ಧನುಷ್ಕೊಟಿ ಜಲಧಾರೆಯುವ ಕಾಲಕ್ಕೆ ತಕ್ಕಂತೆ ಚೆಲುವನ್ನು ಪ್ರದರ್ಶಿಸುತ್ತಾ ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುವುದು ಇದರ ವಿಶೇಷವಾಗಿದೆ. ಹಾಗಾದರೆ ಈ ಜಲಧಾರೆಯನ್ನು ನೋಡದವರು ಈಗ ನೋಡಬೇಕೆಂಬ ಬಯಕೆಯಾದರೆ, ಅಂತಹವರಿಗೆ ಧನುಷ್ಕೋಟಿ ಜಲಧಾರೆ ಕುರಿತಂತೆ ಒಂದಷ್ಟು ಮಾಹಿತಿ ನೀಡಲಾಗುತ್ತಿದ್ದು, ಜಲಧಾರೆಯು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿಗೆ ಹತ್ತಿರದ ಚುಂಚನಕಟ್ಟೆ ಬಳಿಯಿದ್ದು, ಮೈಸೂರಿನಿಂದ 54ಕಿ.ಮೀ.ದೂರದಲ್ಲಿದೆ.
ಕಾವೇರಿ ನದಿಯಿಂದ ಸೃಷ್ಟಿಯಾಗಿರುವ ಧನುಷ್ಕೋಟಿ ಜಲಪಾತವು ವಿಶಾಲ ಬಂಡೆಗಳ ನಡುವೆ ಸುಮಾರು 400 ಅಡಿ ಅಗಲವಾಗಿ 60 ಅಡಿ ಎತ್ತರದಿಂದ ಧುಮುಕುತ್ತದೆ. ಈ ವೇಳೆ ಕಂಡು ಬರುವ ದೃಶ್ಯ ಕಣ್ಮನ ಸೆಳೆಯುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಉಗ್ರರೂಪ ತಾಳಿ ಕೆಂಬಣ್ಣದಿಂದ ಭೋರ್ಗರೆದು ಧುಮುಕುವಾಗಿನ ದೃಶ್ಯ ಮೈನವಿರೇಳಿಸುತ್ತದೆ.
ಮೈಸೂರಿನ ಸುತ್ತಮುತ್ತ ಪ್ರವಾಸಿಗರಿಗೆ ವೀಕ್ಷಿಸಲು ಯಾವುದೇ ಜಲಪಾತಗಳು ಇಲ್ಲದ ಕಾರಣ ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹಾಗೆಯೇ ಸುತ್ತಮುತ್ತ ಇರುವ ದೇಗುಲಗಳಿಗೆ ಭೇಟಿ ನೀಡುವ ಭಕ್ತರು ಕೂಡ ಇಲ್ಲಿಗೆ ಆಗಮಿಸುವುದರಿಂದ ಸದಾ ಜನರಿಂದ ತುಂಬಿರುತ್ತದೆ. ಇದೆಲ್ಲದರ ನಡುವೆ ಪೇಟೆ, ಪಟ್ಟಣದ ಬದುಕಿನಿಂದ, ಕೆಲಸದ ಒತ್ತಡದಿಂದ ಮುಕ್ತವಾಗಿ ನಿಸರ್ಗದ ಸುಂದರ ಪರಿಸರದಲ್ಲಿ ಧುಮುಕುವ ಜಲಧಾರೆಯನ್ನು ಕಣ್ತುಂಬಿಸಿಕೊಂಡು ಒಂದಷ್ಟು ಸಮಯವನ್ನು ಕಳೆದು ಹೋಗುವ ಸಲುವಾಗಿ ಕುಟುಂಬದೊಂದಿಗೆ ಬಂದು ಒಂದಷ್ಟು ಸಮಯವನ್ನು ಖುಷಿಯಾಗಿ ನೆಮ್ಮದಿಯಾಗಿ ಕಳೆದು ಹೋಗುತ್ತಾರೆ.
ಧನುಷ್ಕೋಟಿ ಜಲಪಾತ ಎಷ್ಟು ಸುಂದರವಾಗಿದೆಯೋ ಅಷ್ಟೇ ಅಪಾಯಕಾರಿಯಾಗಿದೆ. ಇಲ್ಲಿ ಈಜುವುದು, ಸ್ನಾನಮಾಡುವುದನ್ನು ನಿರ್ಬಂಧಿಸಲಾಗಿದೆ. ಆದರೂ ಕೆಲವರು ನೀರಿಗಿಳಿದು ಹುಚ್ಚಾಟವಾಡಿ ಪ್ರಾಣ ಕಳೆದುಕೊಂಡಿದ್ದಾರೆ. ಜಲಪಾತ ವೀಕ್ಷಣೆಗೆಂದು ಚುಂಚನಕಟ್ಟೆಗೆ ಬರುವ ಪ್ರವಾಸಿಗರು ರಾಮನದರ್ಶನ ಮಾಡಿ ಜಲಪಾತದ ವೈಭವವನ್ನು ಕಣ್ತುಂಬಿಸಿಕೊಂಡು ಸಮೀಪವಿರುವ ರಾಮಸಮುದ್ರ ಅಣ್ಣೆಕಟ್ಟೆ ಮತ್ತು ಸಕ್ಕರೆ ಗ್ರಾಮದ ಬಳಿಯ ಬಳ್ಳೂರು ಅಣ್ಣೆಕಟ್ಟೆಗೂ ತೆರಳಿ ಅಲ್ಲಿನ ಪ್ರಾಕೃತಿಕ ಚೆಲುವನ್ನು ಸವಿದು ಹಿಂತಿರುಗಿದರೆ ನಿಸರ್ಗದ ನಡುವೆ ಕಳೆದ ಸುಂದರ ಕ್ಷಣಗಳು ಹಸಿರಾಗಿರಲಿವೆ.
ಇದೆಲ್ಲದರ ನಡುವೆ ಧನುಷ್ಕೋಟಿ ಜಲಧಾರೆಯನ್ನು ಪವಿತ್ರ ಎಂದು ನಂಬಲಾಗುತ್ತದೆ. ಕಾರಣ ಸಾಮಾನ್ಯವಾಗಿ ಹೆಬ್ಬಂಡೆಗಳ ಮೇಲಿಂದ ಕೆಳಕ್ಕೆ ನೀರು ಧುಮಿಕಿದಾಗ ಜಲಪಾತ ಸೃಷ್ಟಿಯಾಗಿ ಬಿಡುತ್ತದೆ. ಆದರೆ ಈ ಜಲಧಾರೆ ಹಾಗೆ ಸೃಷ್ಟಿಯಾಗಿದ್ದಲ್ಲ. ಇದಕ್ಕೊಂದು ಪೌರಾಣಿಕ ನಂಟಿದೆ. ಆ ಕಥೆಯ ಪ್ರಕಾರ ಹೇಳುವುದಾದರೆ ಪೌರಾಣಿಕ ಯುಗದಲ್ಲಿ ಈ ಕ್ಷೇತ್ರವು ದಟ್ಟ ಕಾಡಿನಿಂದ ಕೂಡಿದ ಅರಣ್ಯವಾಗಿತ್ತಂತೆ. ಇದನ್ನು ದಂಡಕಾರಣ್ಯವೆಂದು ಕರೆಯಲಾಗುತ್ತಿತ್ತಂತೆ. ಒಮ್ಮೆ ಇಲ್ಲಿಗೆ ಆಗಮಿಸಿದ ತೃಣಬಿಂಧು ಮಹರ್ಷಿಗಳು ಈ ಸ್ಥಳವನ್ನು ನೋಡಿ ತಮ್ಮ ತಪಸ್ಸಿಗೆ ಇದು ಸೂಕ್ತ ಸ್ಥಳವೆಂದು ನಿರ್ಧರಿಸುತ್ತಾರೆ. ಆದರೆ ತಪಸ್ಸು ಮಾಡುವ ಮುನ್ನ ಸ್ನಾನ, ಜಪ ಮಾಡಲು ನದಿ ಅವಶ್ಯಕತೆಯಿರುವುದರಿಂದ ಅವರು ನದಿಗಾಗಿ ಹುಡುಕಾಡುತ್ತಾರೆ.
ಈ ವೇಳೆ ಅವರಿಗೆ ಅಲ್ಲಿಯೇ ಗುಪ್ತಗಾಮಿನಿಯಾಗಿ ಹರಿಯುವ ಕಾವೇರಿ ನದಿ ಕಾಣಿಸುವುದಿಲ್ಲ. ಹೀಗಾಗಿ ನಾರಾಯಣನನ್ನು ಕುರಿತು ತಪಸ್ಸು ಮಾಡಲು ಆರಂಭಿಸುತ್ತಾರೆ. ಅವರ ತಪಸ್ಸಿಗೆ ಒಲಿದ ನಾರಾಯಣ ಗುಪ್ತಗಾಮಿನಿಯಾದ ಹರಿಯುತ್ತಿದ್ದ ಕಾವೇರಿಯನ್ನು ತೋರಿಸುತ್ತಾನೆ. ಅಷ್ಟೇ ಅಲ್ಲದೆ ತ್ರೇತಾಯುಗದಲ್ಲಿ ರಾಮನ ಅವತಾರವೆತ್ತಿ ರಾವಣನನ್ನು ಸಂಹಾರ ಮಾಡಿ ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಡುತ್ತೇನೆಂದು ಮಾತು ನೀಡುತ್ತಾನೆ. ಕಾಲಾಂತರದಲ್ಲಿ ತ್ರೇತಾಯುಗದಲ್ಲಿ ಶ್ರೀರಾಮ, ಸೀತೆ ಲಕ್ಷ್ಮಣರಾದಿಯಾಗಿ ವಾನರ ಸೇನೆಯು ಲಂಕೆಯಲ್ಲಿ ರಾವಣನನ್ನು ಸಂಹಾರ ಮಾಡಿ ಹಿಂತಿರುಗುವಾಗಿ ಈ ಕ್ಷೇತ್ರಕ್ಕೆ ಬರುತ್ತಾರೆ.
ಈ ವೇಳೆ ಲಕ್ಷ್ಮಣನಿಗೆ ರಾಮ ಬಂಡೆಯನ್ನು ಒಡೆಯಲು ಹೇಳುತ್ತಾನೆ. ಲಕ್ಷ್ಮಣ ಹೊಡೆದ ಬಾಣಕ್ಕೆ ಬಂಡೆ ಚೂರಾಗಿ ಒಡೆದು ಅದರ ನಡುವಿನಿಂದ ಕಾವೇರಿ ಉಕ್ಕಿ ಹರಿಯುತ್ತಾಳೆ. ಹೀಗೆ ಲಕ್ಷ್ಮಣ ಬಾಣ ಬಿಟ್ಟ ಸ್ಥಳದಲ್ಲಿ ಸೃಷ್ಟಿಯಾದ ಜಲಧಾರೆಯೇ ಧನುಷ್ಕೋಟಿ ಜಲಧಾರೆಯಾಗಿದೆ. ಈ ಜಲಧಾರೆ ಎಷ್ಟೇ ಭೋರ್ಗರೆದು ಸುತ್ತಮುತ್ತಲ ಜನರ ಕಿವಿಗೆ ಅಪ್ಪಳಿಸಿದರೂ ಇದರ ಇನ್ನೊಂದು ವಿಶೇಷತೆ ಏನೆಂದರೆ ಸಮೀಪದ ರಾಮದೇವರ ದೇವಾಲಯದ ಗರ್ಭಗುಡಿಗೆ ಆ ಶಬ್ದವೇ ಕೇಳಿಸುವುದಿಲ್ಲ. ಅದು ಏನೇ ಇರಲಿ. ಧನುಷ್ಕೋಟಿ ಜಲಧಾರೆ ಇದೀಗ ಧುಮ್ಮಿಕ್ಕಿ ಹರಿಯುತ್ತಿದ್ದು, ಇಲ್ಲಿಗೆ ತೆರಳಿದವರು ಇದರ ಸೌಂದರ್ಯಕ್ಕೆ ಮನಸೋಲದೆ ಇರಲಾರರು ಎನ್ನುವುದರಲ್ಲಿ ಎರಡು ಮಾತಿಲ್ಲ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ