ಬಳ್ಳಾರಿ: ಗಡಿನಾಡು ಜಿಲ್ಲೆಯಲ್ಲಿ ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಿದ್ದು, ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಬಿಸಿಲಿನ ಈ ಬೇಗೆಯಿಂದ ಜನಸಾಮಾನ್ಯರು ಕಂಗೆಟ್ಟಿದ್ದರೆ, ಇತ್ತ ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವಾಗಿರುವ ಡಿಎಆರ್ ಶ್ವಾನ ಪಡೆಯೂ ಬಸವಳಿಯುತ್ತಿದೆ. ಈ ಹಿನ್ನೆಲೆ ಯಲ್ಲಿ ತನ್ನ ಶ್ವಾನಗಳ ಆರೋಗ್ಯ ಕಾಪಾಡಲು ಬಳ್ಳಾರಿ ಪೊಲೀಸ್ ಇಲಾಖೆ ವಿಶೇಷ ‘ಬೇಸಿಗೆ ಆರೈಕೆ’ಗೆ ಮುಂದಾಗಿದೆ.
ಶ್ವಾನಭವನದಲ್ಲಿ ಕೂಲರ್ ತಂಪು:
ನಗರದ ಡಿಎಆರ್ ಮೈದಾನ ದಲ್ಲಿರುವ ಶ್ವಾನಗಳ ಕೊಠಡಿಗಳಲ್ಲಿ ಇದೀಗ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೆನಡಾ ಮತ್ತು ಜರ್ಮನ್ ಮೂಲದ 6ಕ್ಕೂ ಹೆಚ್ಚು ಶ್ವಾನಗಳಿಗೆ ಬಿಸಿಲಿನ ತಾಪ ತಟ್ಟದಂತೆ ಕೆನಲ್‌ನಲ್ಲಿ ಏರ್ ಕೂಲರ್ ವ್ಯವಸ್ಥೆ ಮಾಡಲಾಗಿದೆ. ಮನುಷ್ಯರು ಬೆವರಿನ ಮೂಲಕ ದೇಹದ ಉಷ್ಣಾಂಶ ಸಮತೋಲನ ಮಾಡಿಕೊಂಡರೆ, ಶ್ವಾನಗಳು ಬಾಯಿ ಮೂಲಕ ಉಸಿರಾಡಿ ತಂಪು ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಅವುಗಳ ದೇಹ ತಂಪಾಗಿರಿಸಲು ದಿನಕ್ಕೆ ಎರಡು ಬಾರಿ ತಣ್ಣೀರಿನ ಸ್ನಾನ ಮಾಡಿಸಲಾಗುತ್ತಿದೆ.
ಡಯಟ್‌ನಲ್ಲಿ ಎಳನೀರು, ರಾಗಿ ಮಾಲ್ಟ್:
ಕೇವಲ ಬಾಹ್ಯ ಆರೈಕೆ ಮಾತ್ರವಲ್ಲದೆ, ಶ್ವಾನಗಳ ಆಹಾರ ಕ್ರಮದಲ್ಲೂ ಬದಲಾವಣೆ ತರಲಾಗಿದೆ. ನಿರ್ಜಲೀಕರಣ(Dehydration) ತಡೆಯಲು ಪ್ರತಿದಿನ ಎಳನೀರು ನೀಡಲಾಗುತ್ತಿದೆ. ಜೊತೆಗೆ ನೀರಿನಲ್ಲಿ ಗ್ಲೂಕಾನ್-ಡಿ, ಶಕ್ತಿವರ್ಧಕ ಪೇಯಗಳು ಮತ್ತು ಆರೋಗ್ಯಕ್ಕೆ ಹಿತವಾದ ರಾಗಿ ಮಾಲ್ಟ್ ಸೇರಿದಂತೆ ದ್ರವರೂಪದ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಅಪರಾಧ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ಮೂಕ ಪ್ರಾಣಿಗಳ ಮೇಲೆ ಪೊಲೀಸ್ ಇಲಾಖೆ
ತೋರುತ್ತಿರುವ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.