ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆಗಳ ಕಾವು ಏರುತ್ತಿದ್ದಂತೆ, ಜನಸಾಮಾನ್ಯರ ಸಮಸ್ಯೆಗಳು ಮೂಲೆಗುಂಪಾಗಿವೆ. ಮುಖ್ಯಮಂತ್ರಿ ಸಿದ್ದ ರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿವಿಧ ರಾಜ್ಯ ಹಾಗೂ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದು, ಕರ್ನಾಟಕದ ಆಡಳಿತ ಯಂತ್ರವು ಸಂಪೂರ್ಣವಾಗಿ ಹಳಿ ತಪ್ಪಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಚುನಾವಣಾ ಪ್ರಚಾರದ ಅಬ್ಬರದ ನಡುವೆ ಆಡಳಿತದ ಉಪೇಕ್ಷೆ
ಏಪ್ರಿಲ್ 26 ರಂದು ಬಜೆಟ್ ಅಧಿವೇಶನ ಮುಕ್ತಾಯಗೊಂಡ ನಂತರ, ಸರ್ಕಾರವು ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಬೇಕಿತ್ತು. ಆದರೆ, ಕಾಂಗ್ರೆಸ್‌ನ ಅಗ್ರ ನಾಯಕರು ದಾವಣಗೆರೆ ದಕ್ಷಿಣ, ಬಾಗಲಕೋಟೆ ಸೇರಿದಂತೆ ನೆರೆಯ ಕೇರಳ, ಅಸ್ಸಾಂ ಮತ್ತು ತಮಿಳುನಾಡುಗಳಲ್ಲಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ 12 ದಿನಗಳಲ್ಲಿ ಮುಖ್ಯಮಂತ್ರಿಗಳು ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿಯೇ ಹೆಚ್ಚಿನ ಸಮಯ ಕಳೆದಿದ್ದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೊರ ರಾಜ್ಯಗಳ ಪ್ರವಾಸದಲ್ಲಿದ್ದಾರೆ.
ಮಾರ್ಚ್ 30 ರಿಂದ ಸಿಎಂ ಅವರು ಬಾಗಲಕೋಟೆಯಲ್ಲಿ 6 ದಿನ ಹಾಗೂ ದಾವಣಗೆರೆಯಲ್ಲಿ 4 ದಿನಗಳ ಕಾಲ ಪ್ರಚಾರ ನಡೆಸಿದ್ದರು. ಇದರ ನಡುವೆ ಕಾಸರಗೋಡು ಮತ್ತು ದೆಹಲಿ ಪ್ರವಾಸಗಳೂ ಸೇರಿವೆ.
ಬಜೆಟ್ ನಂತರದ ‘ಶೂನ್ಯ’ ಪರಿಶೀಲನೆ
ಸಾಮಾನ್ಯವಾಗಿ ಬಜೆಟ್ ಮಂಡನೆಯಾದ ಒಂದು ತಿಂಗಳೊಳಗೆ ಇಲಾಖಾವಾರು ಪರಿಶೀಲನಾ ಸಭೆಗಳನ್ನು ನಡೆಸಿ ಅನುಷ್ಠಾನಕ್ಕೆ ಚಾಲನೆ ನೀಡಲಾಗುತ್ತದೆ. ಆದರೆ ಈ ಬಾರಿ, ಯಾವುದೇ ಪ್ರಮುಖ ಬಜೆಟ್ ಅನುಷ್ಠಾನ ಸಭೆಗಳು ನಡೆದಿಲ್ಲ.
ಮಾದರಿ ನೀತಿ ಸಂಹಿತೆಯ ನೆಪವೊಡ್ಡಿ ಆಡಳಿತಾತ್ಮಕ ಜವಾಬ್ದಾರಿಯಿಂದ ನಾಯಕರು ನುಣುಚಿಕೊಳ್ಳುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ಸಚಿವರ ದಂಡೇ ಚುನಾವಣಾ ಪ್ರಚಾರಕ್ಕೆ ನಿಯೋಜನೆಗೊಂಡಿರುವುದರಿAದ ಸಚಿವಾಲಯಗಳು ಜನರಿಲ್ಲದೆ ಖಾಲಿ ಹೊಡೆಯುತ್ತಿವೆ.
ಸಂಕಷ್ಟದಲ್ಲಿ ಜನತೆ: ಪರಿಹಾರವಿಲ್ಲದ ಸಮಸ್ಯೆಗಳು
ರಾಜ್ಯವು ಪ್ರಸ್ತುತ ಹಲವಾರು ಗಂಭೀರ ಸವಾಲುಗಳನ್ನುಎದುರಿಸುತ್ತಿದೆ, ಆದರೆ ಇವುಗಳನ್ನು ಆಲಿಸುವವರೇ ಇಲ್ಲದಂತಾಗಿದೆ. ಒಂದೆಡೆ ಬೇಸಿಗೆಯ ತಾಪ ಏರುತ್ತಿದ್ದಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಇನ್ನೊಂದೆಡೆ, ಅಕಾಲಿಕ ಮಳೆ ಅಥವಾ ಮಳೆಯ ಅಭಾವದಿಂದ ಸಂಕಷ್ಟಕ್ಕೀಡಾದ ರೈತರಿಗೆ ಪರಿಹಾರ ವಿತರಣೆಯ ಪ್ರಕ್ರಿಯೆ ಕುಂಠಿತಗೊAಡಿದೆ. ಜಾನುವಾರುಗಳಿಗೆ ಮೇವಿನ ಲಭ್ಯತೆ ಕಡಿಮೆಯಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಆಸ್ತಿ ದಾಖಲಾತಿಗಳಿಗೆ ಸಂಬAಧಿಸಿದ ಇ-ಸ್ವತ್ತು ಸರ್ವರ್ ದೋಷದಿಂದಾಗಿ ಸಾರ್ವಜನಿಕರು ವಾರಗಟ್ಟಲೆ ಅಲೆದಾಡುವಂತಾಗಿದೆ. ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಆಡಳಿತ ಯಂತ್ರ ಸ್ತಬ್ಧಗೊಂಡಿರುವುದು ದುರ್ದೈವ ಎನ್ನಬಹುದು.
ವಿರೋಧ ಪಕ್ಷಗಳ ವಾಗ್ದಾಳಿ
ಸರ್ಕಾರದ ಈ ನಡೆಯನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. “ನಾಯಕರೇ ತಲೆಕೆಡಿಸಿಕೊಳ್ಳದಿದ್ದಾಗ ಅಧಿಕಾರಿಗಳು ಏಕೆ ಕೆಲಸ ಮಾಡುತ್ತಾರೆ? ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ ಎಂಬ ಅನುಮಾನ ಮೂಡುತ್ತಿದೆ. ಜನರ ಮೂಲಭೂತ ಸಮಸ್ಯೆಗಳಿಗಿಂತ ಕಾಂಗ್ರೆಸ್‌ಗೆ ಚುನಾವಣಾ ಗೆಲುವೇ ಮುಖ್ಯವಾಗಿದೆ,” ಎಂದು ಅವರು ಕಿಡಿಕಾರಿದ್ದಾರೆ.
ಅಧಿಕಾರ ಹಿಡಿಯುವ ಉಮೇದಿನಲ್ಲಿ ಜನರ ಹಿತಾಸಕ್ತಿಯನ್ನು ಬಲಿಗೊಡುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ಚುನಾವಣಾ ಪ್ರಚಾರದ ನಡುವೆಯೂ ಸಾರ್ವಜನಿಕ ಸೇವೆಗಳು ಅಡೆತಡೆಯಿಲ್ಲದೆ ಸಾಗಬೇಕಿದೆ. ಸರ್ಕಾರವು ತಕ್ಷಣವೇ ಎಚ್ಚೆತ್ತುಕೊಂಡು ಬಾಕಿ ಇರುವ ಪರಿಶೀಲನಾ ಸಭೆಗಳನ್ನು ನಡೆಸಿ, ಆಡಳಿತ ಯಂತ್ರಕ್ಕೆ ಮರುಜೀವ ನೀಡಬೇಕಿದೆ.