ಬೆಂಗಳೂರು: ಪಕ್ಷಾಂತರ ರಾಜಕಾರಣದ ಮೂಲಕ ಸರ್ಕಾರಗಳ ಸ್ಥಿರತೆಗೆ ಧಕ್ಕೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ, ಪಕ್ಷ ಬದಲಾಯಿಸುವ ಶಾಸಕರ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಚರ್ಚೆ ಆರಂಭವಾಗಿದೆ. ಅವಿಶ್ವಾಸ ನಿರ್ಣಯದ ವೇಳೆ ಮತದಾನದ ಹಕ್ಕು ಕಳೆಸುವುದು, ಸಚಿವ ಸ್ಥಾನ ಹಾಗೂ ಲಾಭದಾಯಕ ಸರ್ಕಾರಿ ಹುದ್ದೆಗಳಿಂದ ಅನರ್ಹಗೊಳಿಸುವಂತಹ ಕಠಿಣ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಪಕ್ಷಾಂತರ ವಿರೋಧಿ ಸಮಿತಿ ಗಂಭೀರವಾಗಿ ಪರಿಶೀಲಿಸುತ್ತಿದೆ.
ಸಂವಿಧಾನದ 10ನೇ ಅನುಸೂಚನೆಗೆ ಸಂಬಂಧಿಸಿದ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಚಿಸಲಾದ ಸಮಿತಿ ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ ಅಂತಿಮ ಸಭೆ ನಡೆಸಿ ತನ್ನ ಶಿಫಾರಸು ವರದಿಯನ್ನು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಸಲ್ಲಿಸಲಿದೆ
. ಮಹಾರಾಷ್ಟ್ರ ವಿಧಾನಸಭಾಧ್ಯಕ್ಷ ರಾಹುಲ್ ನರ್ವೇಕರ್ ನೇತೃತ್ವದ ಈ ಸಮಿತಿಯಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸುರಮ ಪಾದಿ ಮತ್ತು ಶರಿಂಗೈನ್ ಲಾಂಗ್ ಕುಮೆರ್ ಸದಸ್ಯರಾಗಿದ್ದಾರೆ. ಫೆಬ್ರವರಿಯಲ್ಲಿ ರಚಿಸಲಾದ ಈ ಸಮಿತಿ ಈಗಾಗಲೇ ಮುಂಬೈ ಮತ್ತು ಪುರಿಯಲ್ಲಿ ಸಭೆ ನಡೆಸಿದ್ದು, ಪಕ್ಷಾಂತರ ರಾಜಕಾರಣಕ್ಕೆ ಕಡಿವಾಣ ಹಾಕುವ ಹಲವು ಮಹತ್ವದ ಪ್ರಸ್ತಾವನೆಗಳ ಕುರಿತು ಚರ್ಚಿಸಿದೆ. ಅದರಲ್ಲೂ ಮುಖ್ಯವಾಗಿ, ಪಕ್ಷಾಂತರ ಮಾಡಿದ ಶಾಸಕರು ಅವಿಶ್ವಾಸ ನಿರ್ಣಯದ ವೇಳೆ ಮತದಾನ ಮಾಡುವ ಹಕ್ಕು ಕಳೆದುಕೊಳ್ಳುವಂತೆ ಮಾಡುವ ಪ್ರಸ್ತಾವನೆಗೆ ಹೆಚ್ಚು ಮಹತ್ವ ಸಿಕ್ಕಿದೆ. ರಾಜಕೀಯ ಲಾಭಕ್ಕಾಗಿ ಸರ್ಕಾರಗಳನ್ನು ಉರುಳಿಸುವ ಪ್ರವೃತ್ತಿಗೆ ಇದರಿಂದ ತಡೆ ಬೀಳಲಿದೆ ಎನ್ನುವುದು ಸಮಿತಿಯ ಅಭಿಪ್ರಾಯ. ಇದರ ಜೊತೆಗೆ, ಪಕ್ಷಾಂತರ ಮಾಡಿದವರು ಹೊಸ ಸರ್ಕಾರದಲ್ಲಿ ಸಚಿವರಾಗುವುದು, ನಿಗಮಮಂಡಳಿಗಳ ಅಧ್ಯಕ್ಷ ಸ್ಥಾನ ವಹಿಸುವುದು ಅಥವಾ ಯಾವುದೇ ಲಾಭದಾಯಕ ಹುದ್ದೆ ಸ್ವೀಕರಿಸುವುದನ್ನೂ ನಿμÉೀಧಿಸುವ ಚಿಂತನೆ ನಡೆದಿದೆ. ಇನ್ನೊಂದು ಮಹತ್ವದ ಬದಲಾವಣೆಯಾಗಿ, ಪಕ್ಷ ವಿಭಜನೆ ಪ್ರಕರಣಗಳಲ್ಲಿ “ನಿಜವಾದ ರಾಜಕೀಯ ಪಕ್ಷ ಯಾವುದು?” ಎಂಬ ವಿವಾದಗಳನ್ನು ತೀರ್ಮಾನಿಸಲು ಪ್ರತ್ಯೇಕ ನ್ಯಾಯಮಂಡಳಿ ರಚಿಸುವ ಪ್ರಸ್ತಾವನೆಯೂ ಚರ್ಚೆಯಲ್ಲಿದೆ. ಇದರಿಂದ ವಿಧಾನಸಭಾಧ್ಯಕ್ಷರ ಮೇಲಿನ ರಾಜಕೀಯ ಒತ್ತಡ ಕಡಿಮೆಯಾಗಲಿದೆ ಎನ್ನಲಾಗಿದೆ. ಪಕ್ಷದ ವಿಪ್ ಹಾಗೂ ವಿಧಾನಮಂಡಲ ಪಕ್ಷದ ಮುಖ್ಯ ವಿಪ್‍ಗಳ ಅಧಿಕಾರದ ಕುರಿತು ಸ್ಪಷ್ಟ ನಿಯಮ ರೂಪಿಸುವ ಅಗತ್ಯವನ್ನೂ ಸಮಿತಿ ಪರಿಶೀಲಿಸುತ್ತಿದೆ. ಜೊತೆಗೆ, ಅನರ್ಹತಾ ಅರ್ಜಿಗಳ ವಿಚಾರಣೆಯಲ್ಲಿ ಆಗುತ್ತಿರುವ ದೀರ್ಘ ವಿಳಂಬ ತಪ್ಪಿಸಲು ಮೂರುರಿಂದ ಆರು ತಿಂಗಳೊಳಗೆ ತೀರ್ಮಾನ ಕೈಗೊಳ್ಳುವಂತೆ ಕಾನೂನುಬದ್ಧ ಕಾಲಮಿತಿಯನ್ನು ನಿಗದಿಪಡಿಸುವ ಸಾಧ್ಯತೆಯೂ ಇದೆ. “ಅನರ್ಹತಾ ಅರ್ಜಿಗಳ ಪ್ರಕ್ರಿಯೆ ಹಲವು ವರ್ಷಗಳು ಞ್ವoಳೆಯುತ್ತದೆ. ಇದನ್ನು ಮೂರರಿಂದ ಆರು ತಿಂಗಳೊಳಗೆ ಮುಗಿಸುವ ವ್ಯವಸ್ಥೆ ತರಲು ಪ್ರಯತ್ನಿಸುತ್ತಿದ್ದೇವೆ,” ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ. ಇದೇ ವೇಳೆ, ‘ನಿಯಮಗಳು ಮತ್ತು ವಿಧಾನಗಳು’ ಕುರಿತ ಮತ್ತೊಂದು ರಾಷ್ಟ್ರೀಯ ಸಮಿತಿ ಮೇ 12 ಮತ್ತು 13ರಂದು ಮೈಸೂರಿನಲ್ಲಿ ಸಭೆ ನಡೆಸಲಿದ್ದು, ದೇಶದ ವಿವಿಧ ವಿಧಾನಸಭೆಗಳಲ್ಲಿ ಏಕರೂಪ ನಿಯಮಗಳನ್ನು ಜಾರಿಗೊಳಿಸುವ ಕುರಿತು ಚರ್ಚಿಸಲಿದೆ. ಈ ಸಮಿತಿಯಲ್ಲಿ ಕರ್ನಾಟಕ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ನಾಗಾಲ್ಯಾಂಡ್ ಹಾಗೂ ದೆಹಲಿ ವಿಧಾನಸಭಾಧ್ಯಕ್ಷರು ಸದಸ್ಯರಾಗಿದ್ದು, ದೇಶದಾದ್ಯಂತ ಸಾಮಾನ್ಯ ವಿಧಾನ ಮತ್ತು ಉತ್ತಮ ಪದ್ಧತಿಗಳನ್ನು ರೂಪಿಸುವ ಉದ್ದೇಶ ಹೊಂದಿದೆ.