ಚೆನ್ನೈ : ಚುನಾವಣಾ ರಾಜಕಾರಣದಲ್ಲಿ ಎದುರಿಸಿದ ಮೊದಲ ಎಸೆತದಲ್ಲಿಯೇ ಸ್ಟಾರ್ ನಟ ವಿಜಯ್ ಸಿಕ್ಸರ್ ಬಾರಿಸಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶಗಳು ಸಮೀಕ್ಷೆ, ಲೆಕ್ಕಾಚಾರಗಳನ್ನು ಉಲ್ಟಾಪಲ್ಟಾ ಮಾಡುತ್ತಿವೆ.
ಬೆಳಿಗ್ಗೆ 10:40 ರ ಹೊತ್ತಿನ ಮತಎಣಿಕೆ ಮಾಹಿತಿಯ ಪ್ರಕಾರ ವಿಜಯ್ ನೇತೃತ್ವದ ಟಿವಿಕೆ (ತಮಿಳಗ ವೆಟ್ರಿಕ ಕಳಗಂ) ಬರೋಬ್ಬರಿ 106 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ತಮಿಳುನಾಡಿನ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ-ಬಿಜೆಪಿ ಮೈತ್ರಿ 78 ಸ್ಥಾನ ಪಡೆದಿದ್ದು ಎರಡನೇ ಸ್ಥಾನದಲ್ಲಿದ್ದರೆ ಮತ್ತು ಹಾಲಿ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ-ಕಾAಗ್ರೆಸ್ ಮೈತ್ರಿ 46 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಮೂರನೇ ಸ್ಥಾನಕ್ಕೆ ಕುಸಿದಿದೆ.
ಕೇವಲ ಮತಎಣಿಕೆಯ ಮುನ್ನಡೆಯನ್ನಷ್ಟೇ ಆಧರಿಸಿ ಅಂತಿಮ ಫಲಿತಾಂಶದ ಬಗ್ಗೆ ನಿರ್ಣಯಕ್ಕೆ ಬರುವುದು ತಪ್ಪು. ಆದರೂ 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು ಮ್ಯಾಜಿಕ್ ನಂಬರ್ 118. ಅಂದರೆ ಅಧಿಕಾರಕ್ಕೂ ವಿಜಯ್‌ಗೂ ನಡುವೆ ಈ ಹೊತ್ತಿನಲ್ಲಿ ಇರುವುದು ಕೇಲವೇ ಸ್ಥಾನಗಳು ಮಾತ್ರ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಬಿಜೆಪಿ ಪಾಲಿಗೆ ಮಗ್ಗುಲ ಮುಳ್ಳಾಗಿ ಸದಾ ಚುಚ್ಚುವ ಡಿಎಂಕೆಯನ್ನು ಅಧಿಕಾರದಿಂದ ದೂರ ಇರಿಸಲು ಸ್ಟಾಲಿನ್ ಬೆಂಬಲಕ್ಕೆ ಎಐಎಡಿಎಂಕೆ ಮೈತ್ರಿಕೂಟವು ನಿಂತರೆ ಮೊದಲ ಚುನಾವಣೆಯಲ್ಲಿಯೇ ಅಧಿಕಾರ ಹಿಡಿಯುವುದು ವಿಜಯ್‌ಗೆ ಕಷ್ಟವೇನೂ ಆಗಲಾರದು.
ಪತ್ನಿ ಸಂಗೀತಾ ಜೊತೆಗಿನ ಸಾಂಸಾರಿಕ ಬಿಕ್ಕಟ್ಟು, ಕೊನೇ ಗಳಿಗೆಯಲ್ಲಿ ತ್ರೀಶಾ ಜೊತೆಗಿನ ಸಂಬAಧ ಮತ್ತೊಮ್ಮೆ ಬಹಿರಂಗವಾದ ಮುಜುಗರ, ಜನನಾಯಗನ್ ಸಿನಿಮಾ ಬಿಡುಗಡೆ ವಿವಾದ, ಕರೂರು ಕಾಲ್ತುಳಿತ ಪ್ರಕರಣದಲ್ಲಿ ಅನುಭವಿಸಿದ ಮುಜುಗರ ಸೇರಿದಂತೆ ವಿಜಯ್ ಈ ಚುನಾವಣೆಯಲ್ಲಿ ಕಳಾಹೀನ ಸ್ಥಿತಿಯಲ್ಲಿರುತ್ತಾರೆ ಎನ್ನಲು ಹಲವು ಕಾರಣಗಳಿದ್ದವು. ಆದರೆ ಈ ಎಲ್ಲದರ ಹೊರತಾಗಿಯೂ ಜನರು ನೆಚ್ಚಿನ ನಟನ ಕೈಹಿಡಿದು ಅಚ್ಚರಿಯ ಫಲಿತಾಂಶಕ್ಕೆ ಮುನ್ನುಡಿ ಬರೆದಿದ್ದಾರೆ.
ಸ್ವತಃ ವಿಜಯ್ ಅವರು ತಿರುಚ್ಚಿ ಪೂರ್ವ ಮತ್ತು ಪೆರಂಬದೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಡಿಎಂಕೆ ಎದುರಿಸಿದ್ದ ಆಡಳಿತ ವಿರೋಧಿ ಅಲೆಯೇ ಟಿವಿಕೆಗೆ ವರದಾನವಾಗಿದೆ ಎನ್ನುವ ವಿಶ್ಲೇಷಣೆ ಎಲ್ಲೆಡೆ ತೇಲಿ ಬರುತ್ತಿದೆ.
ಚುನಾವಣೆ ಇದ್ದಾಗಲಷ್ಟೇ ಸಕ್ರಿಯರಾಗುವ ಎಐಎಡಿಎಂಕೆ ನಾಯಕರ ನಿಷ್ಕ್ರಿಯ ಪ್ರವೃತ್ತಿಗೂ ಬುದ್ಧಿ ಕಲಿಸಲು ಜನರು ನಿರ್ಧರಿಸಿದ್ದರು. ಈ ಎರಡೂ ವಿದ್ಯಮಾನಗಳ ಲಾಭ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಸಿಕ್ಕಿದೆ.