LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
State News

ಅಂಜನಾದ್ರಿ ಶ್ರೀ ಆಂಜನೇಯ ದೇವಸ್ಥಾನ ರಾಜ್ಯ ಸರ್ಕಾರದ ಅಧೀನದ ಆದೇಶಕ್ಕೆ ಹೈಕೋರ್ಟ್ ತಡೆ

ಪೂಜೆ ಸಲ್ಲಿಸಲು  ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾಗೆ ಅವಕಾಶ

ಗಂಗಾವತಿ: ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ₹ 1997ರ ಸೆಕ್ಷನ್ 23(ಬಿ) ಅಡಿಯಲ್ಲಿ ಅಧಿಸೂಚಿತ ದೇವಸ್ಥಾನವೆಂದು ಘೋಷಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ 2018ರ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಧಾರವಾಡ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಏ.27, 2026ರಂದು ತೀರ್ಪು ಪ್ರಕಟಿಸಿದ್ದು, ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ 2018ರಲ್ಲಿ ಹೊರಡಿಸಿದ್ದ ಅಧಿಸೂಚನೆ ಹಾಗೂ ನಂತರ ಕೊಪ್ಪಳ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಆಡಳಿತಾಧಿಕಾರಿ ನೇಮಕದ ಆದೇಶವನ್ನು ರದ್ದುಪಡಿಸಿದ್ದಾರೆ. ಅಂಜನಾದ್ರಿ ಬೆಟ್ಟದ ದೇವಸ್ಥಾನದ ಅರ್ಚಕ ಹುದ್ದೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ, ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಎಂಬ ಕಾರಣ ನೀಡಿ 2018ರ ಜುಲೈ 18ರಂದು ಅಂದಿನ ಕೊಪ್ಪಳ ಜಿಲ್ಲಾಧಿಕಾರಿಗಳು ದೇವಸ್ಥಾನದ ಆಡಳಿತವನ್ನು ತಮ್ಮ ವಶಕ್ಕೆ ಪಡೆದು ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಆಡಳಿತಾಧಿಕಾರಿಯನ್ನು ನೇಮಿಸಿದ್ದರು. ಬಳಿಕ ಸೆ.24, 2018ರಂದು ದೇವಸ್ಥಾನವನ್ನು ಕಾಯ್ದೆಯ ಸೆಕ್ಷನ್ 23(ಬಿ) ಅಡಿಯಲ್ಲಿ ಅಧಿಸೂಚಿತ ಸಂಸ್ಥೆಯಾಗಿ ಘೋಷಿಸಲಾಗಿತ್ತು. ಈ ಕ್ರಮಗಳನ್ನು ಪ್ರಶ್ನಿಸಿ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಸೇರಿದಂತೆ ವಿವಿಧ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ 2019ರ ಜೂನ್ 26ರಂದು ಕೊಪ್ಪಳ ಜಿಲ್ಲಾಧಿಕಾರಿಗಳು 2018ರ ಜುಲೈ 18ರ ದೇವಸ್ಥಾನ ವಶಕ್ಕೆ ಪಡೆಯುವ ಆದೇಶವನ್ನು ಹಿಂಪಡೆದಿದ್ದರು. ಹೀಗಾಗಿ ಆ ಆದೇಶದ ವಿರುದ್ಧದ ಸವಾಲು ಅಪ್ರಸ್ತುತವಾಗಿದೆ ಎಂದು ನ್ಯಾಯಾಲಯ ಹೇಳಿದೆ. ನೋಟಿಸ್ ನೀಡದೆ ಅಧಿಸೂಚನೆ: ದೇವಸ್ಥಾನವನ್ನು 23(ಬಿ) ಅಡಿಯಲ್ಲಿ ಅಧಿಸೂಚಿತ ಸಂಸ್ಥೆಯಾಗಿ ಘೋಷಿಸುವ ಮುನ್ನ ಅರ್ಜಿದಾರರಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ ಹಾಗೂ ವಿಚಾರಣೆ ನಡೆಸಲಾಗಿಲ್ಲ ಎಂಬುದನ್ನು ನ್ಯಾಯಾಲಯ ಪ್ರಮುಖವಾಗಿ ಪರಿಗಣಿಸಿದೆ. ಕಾಯ್ದೆಯ ಸೆಕ್ಷನ್ 23(ಬಿ)ಯಲ್ಲಿ ಪೂರ್ವ ನೋಟಿಸ್ ನೀಡಬೇಕು ಎಂಬ ಸ್ಪಷ್ಟ ಪದಗಳಿಲ್ಲದಿದ್ದರೂ, ನೈಸರ್ಗಿಕ ನ್ಯಾಯದ ತತ್ವಗಳು ಅನ್ವಯವಾಗುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರವೂ ಅಧಿಸೂಚನೆ ಹೊರಡಿಸುವ ಮೊದಲು ಅರ್ಜಿದಾರರಿಗೆ ನೋಟಿಸ್ ನೀಡಿದ್ದೇವೆ ಅಥವಾ ವಿಚಾರಣೆ ನಡೆಸಿದ್ದೇವೆ ಎಂಬ ಯಾವುದೇ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ. ಹೀಗಾಗಿ 2018ರ ಸೆ.24ರ ಅಧಿಸೂಚನೆ ನೈಸರ್ಗಿಕ ನ್ಯಾಯದ ತತ್ವಗಳ ಉಲ್ಲಂಘನೆಯಿಂದ ದೋಷಪೂರಿತವಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ. 2018ರ ಅಧಿಸೂಚನೆ,ನೇಮಕಾತಿ ಆದೇಶ ರದ್ದು: ಈ ಹಿನ್ನೆಲೆಯಲ್ಲಿ 2018ರ ಸೆ.24ರಂದು ರಾಜ್ಯ ಸರ್ಕಾರದ ಕಂದಾಯ (ಧರ್ಮಾದಾಯ) ಇಲಾಖೆ ಹೊರಡಿಸಿದ್ದ ಸೆಕ್ಷನ್ 23(ಬಿ)ರ ಅಧಿಸೂಚನೆ ಹಾಗೂ 2018ರ ಡಿ.15ರಂದು ಕೊಪ್ಪಳ ಜಿಲ್ಲಾಧಿಕಾರಿಗಳು ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಆಡಳಿತಾಧಿಕಾರಿಯನ್ನು ನೇಮಿಸಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಆದರೆ, ದೇವಸ್ಥಾನವನ್ನು ಮುಂದಿನ ದಿನಗಳಲ್ಲಿ ಕಾಯ್ದೆಯ ವ್ಯಾಪ್ತಿಗೆ ತರಬೇಕೆಂದು ರಾಜ್ಯ ಸರ್ಕಾರ ಬಯಸಿದಲ್ಲಿ, ಕಾನೂನುಬದ್ಧ ಪ್ರಕ್ರಿಯೆ ಅನುಸರಿಸಿ, ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಹಾಗೂ ವಿಚಾರಣೆ ನಡೆಸಿದ ಬಳಿಕ ಹೊಸದಾಗಿ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ನ್ಯಾಯಾಲಯ ಅವಕಾಶ ನೀಡಿದೆ. ಪೂಜೆ ಸಲ್ಲಿಸಲು ವಿದ್ಯಾದಾಸ ಬಾಬಾಗೆ ಅವಕಾಶ: ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಅವರಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಮಾಡಿದ್ದ ಮಧ್ಯಂತರ ವ್ಯವಸ್ಥೆಯನ್ನೂ ನ್ಯಾಯಾಲಯ ಪರಿಗಣಿಸಿದೆ. ಅಂತಿಮ ಆದೇಶದಲ್ಲಿ, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳ ಅನ್ವಯ ವಿದ್ಯಾದಾಸ ಬಾಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅನುಮತಿ ನೀಡಲಾಗಿದೆ. ಐದು ರಿಟ್ ಅರ್ಜಿಗಳ ವಿಚಾರಣೆಯನ್ನು ಒಟ್ಟಿಗೆ ನಡೆಸಿದ ಹೈಕೋರ್ಟ್, W.P. ಓo.105448/2019 ಮತ್ತು W.P. ಓo.111440/2019ನ್ನು ಸಂಪೂರ್ಣವಾಗಿ ಅಂಗೀಕರಿಸಿದ್ದು, W.P. ಓo.107583/2018ನ್ನು ಭಾಗಶಃ ಅಂಗೀಕರಿಸಿದೆ. W.P. ಓo.1047 30/2018ನ್ನು ವಿಲೇವಾರಿ ಮಾಡಿದೆ. W.P. ಓo.147680/2020ನ್ನು ಭಾಗಶಃ ಅಂಗೀಕರಿಸಿದೆ. ತೀರ್ಪಿನ ಸಾರ: ಅಂಜನಾದ್ರಿ ಶ್ರೀ ಆಂಜನೇಯ ದೇವಸ್ಥಾನವನ್ನು ಅಧಿಸೂಚಿತ ದೇವಸ್ಥಾನ ಎಂದು ಘೋಷಿಸಿದ 2018ರ ಅಧಿಸೂಚನೆ ಪ್ರಸ್ತುತ ರದ್ದಾಗಿದೆ. ಆದರೆ ಕಾನೂನುಬದ್ಧ ನೋಟಿಸ್ ಮತ್ತು ವಿಚಾರಣೆ ಸೇರಿದಂತೆ ಅಗತ್ಯ ಪ್ರಕ್ರಿಯೆ ಅನುಸರಿಸಿ ರಾಜ್ಯ ಸರ್ಕಾರವು ಮುಂದಿನ ಕ್ರಮ ಕೈಗೊಳ್ಳಲು ಹೈಕೋರ್ಟ್ ಅವಕಾಶ ನೀಡಿದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಜನಾದ್ರಿ ಶ್ರೀ ಆಂಜನೇಯ ದೇವಸ್ಥಾನ ರಾಜ್ಯ ಸರ್ಕಾರದ ಅಧೀನದ ಆದೇಶಕ್ಕೆ ಹೈಕೋರ್ಟ್ ತಡೆಮೈಕ್ರೋಫೈನಾನ್ಸ್ ಸಂಸ್ಥೆಗಳು ರೈತರಿಗೆ ಕಿರುಕುಳ ನೀಡಿದರೆ ಎಫ್‍ಐಆರ್ ದಾಖಲಿಸಲು ಸೂಚನೆ : ಡಿಸಿಎಂ ಹಲ್ಲೆ ಆರೋಪಕ್ಕೆ ವಿಡಿಯೊದಲ್ಲಿಲ್ಲ ಸಾಕ್ಷ್ಯ: ಎಸ್‍ಪಿ ಸ್ಪಷ್ಟನೆಎಸ್‍ಐಆರ್ ಅನ್ನು ಟೂಲ್‍ಕಿಟ್ ಮಾಡಿಕೊಂಡ ಕಾಂಗ್ರೆಸ್: ಶ್ರೀರಾಮುಲು ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲಬಳ್ಳಾರಿಯಲ್ಲಿ ಎಫ್‌ಐಆರ್‌–ಎಸ್‌ಐಆರ್‌ ಹಗ್ಗಜಗ್ಗಾಟ: ಬಿಜೆಪಿ ಪ್ರತಿಭಟನೆ ವೇಳೆ ಜಿಲ್ಲಾಧ್ಯಕ್ಷರಿಗೆ ಗಾಯದ ಆರೋಪಜನಮನ ಸೆಳೆದ ‘ಪಂಚಮವೇದ ಪ್ರೇಮದ ನಾದ’ಬಳ್ಳಾರಿ: ‘ಪಿ.ಎಂ. ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ' ನೋಂದಣಿ ಶಿಬಿರ‘ಸೇವಾಜ್ಯೋತಿ’ಗೆ ಬಿಜೆಪಿ ರಣಕಹಳೆ ಯಶಸ್ವಿಗೆ ಶಾಸಕ ಜನಾರ್ದನ್‍ರೆಡ್ಡಿ ಕರೆಜನರ ಮನೆ ಬಾಗಿಲಿಗೆ ಸೇವೆ ಒದಗಿಸುವುದು ಸರ್ಕಾರದ ಆಶಯ : ಎಸ್ ಮಧು ಬಂಗಾರಪ್ಪ